ಹಾವೇರಿ: ಅತಿವೃಷ್ಟಿಯಿಂದ ಆಗಿರೋ ಹಾನಿಯಿಂದ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ರೈತನ ಮೃತದೇಹವನ್ನಿಟ್ಟು ರೈತರು ಪ್ರತಿಭಟನೆ ನಡೆಸಿದ ಘಟನೆ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಸರ್ಕಾರಿ ಆಸ್ಪತ್ರೆ ಮುಂದೆ ನಡೆದಿದೆ.
ಮುಷ್ಟೂರು ಗ್ರಾಮದ ಮೂವತ್ತೈದು ವರ್ಷ ವಯಸ್ಸಿನ ಕಿರಣ ಯಲ್ಲಕ್ಕನವರ್ ಎನ್ನುವ ರೈತ ಅತಿವೃಷ್ಟಿಯಿಂದ ಹಾನಿಯಾಗಿ ಮಾಡಿದ ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗಿದ್ದು, ಈತ ಎರಡು ಎಕರೆ ಜಮೀನು ಹೊಂದಿದ್ದಾನೆ. ಬ್ಯಾಂಕ್ ಮತ್ತು ಕೈ ಸಾಲ ಅಂತಾ ಆರು ಲಕ್ಷ ರುಪಾಯಿಗೂ ಅಧಿಕ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. ಆದರೆ ಅತಿವೃಷ್ಟಿಯಿಂದ ಮೆಕ್ಕೆಜೋಳದ ಬೆಳೆ ಸಂಪೂರ್ಣ ಹಾಳಾಗಿದ್ದರಿಂದ ಬೇಸತ್ತು ತನ್ನ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಇದರಿಂದ ಕೆರಳಿದ ರೈತರು ಆಸ್ಪತ್ರೆ ಮುಂದೆ ಕೆಲ ಕಾಲ ರೈತನ ಶವ ಇಟ್ಟು ಪ್ರತಿಭಟನೆ ನಡೆಸಿದರು. ರೈತರ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿದ್ರು.
ಇದಕ್ಕೂ ಮುನ್ನ ತಾಲೂಕು ಆಸ್ಪತ್ರೆ ಶವಾಗಾರಕ್ಕೆ ಆಗಮಿಸಿದ್ದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಮೃತ ರೈತನ ಕುಟುಂಬಕ್ಕೆ ಸಾಂತ್ವನ ಹೇಳಿದ್ರು. ರೈತನ ಆತ್ಮಹತ್ಯೆಗೆ ಸಂಬಂಧಿಸಿದಂತೆ ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.