ಹಾವೇರಿ: ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಯಡಗೋಡ ಗ್ರಾಮದ ಬಸನಗೌಡ ಎಂಬ ರೈತರ ಹೊಲದಲ್ಲಿ ಮಂಗಗಳ ಕಾಟ ಹೆಚ್ಚಿದ್ದು, ಇದರಿಂದಾಗಿ ಬೇಸತ್ತಿದ್ದರು. ಹಿಂಡು ಹಿಂಡಾಗಿ ದಾಂಗುಡಿ ಇಡುವ ಮಂಗಗಳು ಅಡಿಕೆ ಬೆಳೆ ಸೇರಿದಂತೆ ಕುಸುಬಿ, ಮೆಣಸಿನಕಾಯಿ ಬೆಳೆಗಳನ್ನು ಹಾಳುಗೆಡವಿದ್ದವು.
ಬಸನಗೌಡ ತಮ್ಮ ಮೂರು ಎಕರೆ ಜಮೀನಿನಲ್ಲಿ ಅಡಿಕೆ ಗಿಡ ಬೆಳೆಸಿದ್ದಾರೆ. ಮಧ್ಯೆ- ಮಧ್ಯೆ ಮೆಣಸಿನಕಾಯಿ, ಕುಸುಬೆ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದಿದ್ದಾರೆ. ಜಮೀನು ನದಿ ಸಮೀಪ ಇರುವ ಕಾರಣ ಸಾಕಷ್ಟು ಮರಗಳಿವೆ. ಹೀಗಾಗಿ ಮಂಗಗಳು ಹೆಚ್ಚಿದ್ದು, ಬೆಳೆಗಳನ್ನು ಹಾಳು ಮಾಡುತ್ತಿದ್ದವು. ಅಡಕೆ ಗಿಡಗಳನ್ನ ಹಾಳುಗೆಡವಿದ್ದಲ್ಲದೆ, ಕುಸುಬಿ ಮೆಣಸಿಕಾಯಿ ಗಿಡಗಳನ್ನು ಕಿತ್ತು ಹಾಕಿವೆ. ಮಂಗಗಳನ್ನು ಓಡಿಸಲು ಬಸನಗೌಡ ಹಲವು ಉಪಾಯ ಮಾಡಿದ್ರೂ ಪ್ರಯೋಜನವಾಗಲಿಲ್ಲ. ಕೊನೆಗೆ ಯುಟ್ಯೂಬ್ ಮೊರೆ ಹೋದ ಬಸನಗೌಡ ಹೊಸ ಐಡಿಯಾ ಒಂದನ್ನು ಮಾಡಿದ್ರು. ಈಗ ಅವರ ಜಮೀನಿಗೆ ಮಂಗಗಳಿರಲಿ ಯಾವ ಪ್ರಾಣಿಗಳು ಸಹ ಸುಳಿಯುತ್ತಿಲ್ಲ.
ಮಂಗಳನ್ನು ಓಡಿಸಲು ಬಸನಗೌಡ ಪಟಾಕಿ ಸಿಡಿಸಿ ನೋಡಿದ್ರು. ಹಗಲು ರಾತ್ರಿ ಜಮೀನಿನ ಬಳಿಯೇ ಮೊಕ್ಕಂ ಹೂಡಿದ್ರು. ಎಷ್ಟೇ ಪ್ರಯತ್ನ ಮಾಡಿದ್ರು ಕೋತಿಗಳ ಕಾಟ ತಪ್ಪಲಿಲ್ಲ. ಮಂಗಗಳ ಕಾಟಕ್ಕೆ ಬೇಸತ್ತು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರು. ಆದರೆ ಇಲಾಖೆಯ ಅಧಿಕಾರಿಗಳು ಇವರ ಮನವಿಗೆ ಸ್ಪಂದಿಸಲಿಲ್ಲ. ಪರಿಣಾಮ ತಮ್ಮ ಸಮಸ್ಯೆಗೆ ಬಸನಗೌಡ ತಾವೇ ಉಪಾಯ ಹುಡುಕಿ ಕೊನೆಗೆ ಸುಮಾರು ಐದು ಅಡಿ ಎತ್ತರ, ಏಳು ಅಡಿ ಉದ್ದದ ಹುಲಿಯಾಕೃತಿಯನ್ನ ತಂದು ಜಮೀನಿನಲ್ಲಿ ನಿಲ್ಲಿಸಿದ್ದೇ ತಡ, ಈಗ ಮಂಗಗಳಷ್ಟೇ ಅಲ್ಲ, ಕುರಿ, ಎಮ್ಮೆ ಸೇರಿ ಯಾವ ಪ್ರಾಣಿಗಳು ಇತ್ತ ಕಾಲಿಡುತ್ತಿಲ್ಲ.
![farmer saved crops from monkeys by placing duplicate tiger in land](https://etvbharatimages.akamaized.net/etvbharat/prod-images/kn-hvr-01-tiger-ready-pkg-7202143_19022021221501_1902f_1613753101_402.png)
ಹುಲಿಯಾಕೃತಿ ತಂದಿಡುವಲ್ಲಿ ರೈತ ಬಸನಗೌಡನಿಗೆ ನೆರವಾಗಿದ್ದು ಯಡಗೋಡ ಪ್ರೌಢಶಾಲೆಯ ಕಲಾಶಿಕ್ಷಕ ಪರಮೇಶ್ವರ. ಬಸನಗೌಡ ಈ ರೀತಿ ಉಪಾಯ ಹೇಳುತ್ತಿದ್ದಂತೆ ಶಿಕ್ಷಕ ಪರಮೇಶ ಹುಲಿ ಆಕೃತಿ ನಿರ್ಮಿಸಿ ಕೊಟ್ಟರು. ಕಟ್ಟಿಗೆಯ ಬೊಂಬು ಹಳೆಯ ಬಟ್ಟೆ, ಹುಲ್ಲಿನಿಂದ ಹುಲಿಯಾಕೃತಿ ನಿರ್ಮಿಸಿದ್ದಾರೆ. ಹುಲಿಯ ಚರ್ಮದಂತೆ ಕಾಣುವ ಬಟ್ಟೆಯನ್ನೇ ಬಳಸಿ ಈ ಹುಲಿಯಾಕೃತಿ ತಯಾರಿಸಿರುವುದರಿಂದ, ಇದನ್ನು ನೋಡಿದ ಮಂಗಗಳು ಹೆದರಿ ಇತ್ತ ಸುಳಿವುಯುತ್ತಿಲ್ಲ. ಹೀಗಾಗಿ ಸದ್ಯ ಮಂಗನ ಕಾಟ ತಪ್ಪಿದ್ದಕ್ಕೆ ರೈತ ಬಸನಗೌಡ ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಗಲ್ವಾನ್ ಸಂಘರ್ಷದ ವಿಡಿಯೋ ರಿಲೀಸ್ ಮಾಡಿದ ಚೀನಾ!