ಹಾನಗಲ್: ಕೊರೊನಾ ವೈರಸ್ ರೋಗ ಒಂದು ಸಾಮಾನ್ಯ ಕಾಯಿಲೆಯಾಗಿದೆ. ದಯವಿಟ್ಟು ಸಾರ್ವಜನಿಕರು ಕೊವೀಡ್-19 ರೋಗಿಗಳನ್ನು ಗೌರವದಿಂದ ಕಾಣಬೇಕು ಮತ್ತು ಮುಂಜಾಗರೂಕತೆಯಿಂದಿರಬೇಕು ಎಂದು ಆಯುಷ್ ವೈದ್ಯ ಫೆಡರೇಷನ್ ಹಾವೇರಿ ಜಿಲ್ಲಾಧ್ಯಕ್ಷ ಡಾ. ಸುನೀಲ ಹಿರೇಮಠ ತಿಳಿಸಿದರು.
ದೇಶಾದ್ಯಂತ ಈ ಮಹಾಮಾರಿ ಹಬ್ಬುತ್ತಿದೆ. ಅದರ ಜೊತೆಗೆ ನಾವು ನಮ್ಮ ಮಾನವೀಯ ಮೌಲ್ಯಗಳನ್ನು ಮರೆಯುತ್ತಿದ್ದೇವೆ. ಈ ರೋಗಕ್ಕೆ ಜನರು ಹೆದರುವ ಅವಶ್ಯಕತೆ ಇಲ್ಲ. ರೋಗ ಬಂದವರು ಒಂದು ವಾರದಲ್ಲಿ ಸಾಮಾನ್ಯ ಸ್ಥಿತಿಗೆ ಬರುತ್ತಾರೆ. ನಮ್ಮಲ್ಲಿ ವ್ಯಾಧಿಕ್ಷಮತ್ವ ಮತ್ತು ರೋಗ ನಿರೋಧಕ ಶಕ್ತಿ ಸರಿಯಾಗಿದ್ದರೆ ಯಾವುದೇ ವೈರಸ್ ದಾಳಿ ಮಾಡುವುದಿಲ್ಲ. ರೋಗ ನಿರೋಧಕ ಶಕ್ತಿ ಕಡಿಮೆ ಇದ್ದವರಿಗೆ ಇದು ತೊಂದರೆ ಕೊಡುತ್ತದೆ ಎಂದು ಅವರು ಹೇಳಿದರು.
ಈಗ ಈ ಮಹಾಮಾರಿ ಶಹರುಗಳಿಂದ ಹಳ್ಳಿಗಳಿಗೆ ವ್ಯಾಪಿಸಿದೆ. ಹಳ್ಳಿಗಳಲ್ಲಿ ಜನರು ರೋಗಿಗಳನ್ನು ತುಂಬಾ ಅಗೌರವದಿಂದ ಕಾಣುತ್ತಿದ್ದಾರೆ. ಅವರನ್ನು ಹಿಡಿದುಕೊಂಡು ಹೋದರು ಎಂಬ ಶಬ್ದ ಬಳಸುತ್ತಿದ್ದಾರೆ. ಇದರಿಂದ ಪೀಡಿತ ಕುಟುಂಬದವರಿಗೆ ಮಾನಸಿಕವಾಗಿ ಹಿಂಸೆಯಾಗುತ್ತದೆ. ಇದನ್ನು ಸುತ್ತಮುತ್ತಲಿನ ನಾಗರಿಕರು, ಗ್ರಾಮಸ್ಥರು ಅರಿತುಕೊಂಡು ಅವರನ್ನು ಗೌರವದಿಂದ ಚಿಕಿತ್ಸೆಗೆ ಕಳಿಸಿಕೊಡಬೇಕು. ಚಿಕಿತ್ಸೆ ಪಡೆದು ಗುಣಮುಖರಾಗಿ ಬ೦ದ ನಂತರವೂ ಅವರನ್ನು ಗೌರವದಿಂದ ಕಾಣಬೇಕು. ಏಕೆಂದರೆ ಈ ರೋಗ ಮುಂದಿನ ದಿನಗಳಲ್ಲಿ ಯಾರಿಗಾದರೂ ಬರಬಹುದು ಎಂದು ಡಾ. ಹಿರೇಮಠ ಮಾರ್ಮಿಕವಾಗಿ ಹೇಳಿದರು.
ನಾವೆಲ್ಲರೂ ಮುಂದಿನ ದಿನಗಳಲ್ಲಿ ಅತ್ಯಂತ ಜಾಗರೂಕರಾಗಿರಬೇಕು ಹಾಗೂ ಈ ರೋಗಕ್ಕೆ ಹೆದರುವ ಅವಶ್ಯಕತೆ ಇಲ್ಲ. ಕೆಲ ನಿಯಮಗಳನ್ನು ಪಾಲಿಸಿದರೆ ನಮ್ಮಿಂದ ಇದು ದೂರವಾಗುತ್ತದೆ. ಮನುಕುಲವು ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿ ಇರುವುದರಿಂದ ನಾವು ಧೈರ್ಯದಿಂದ ಎಲ್ಲವನ್ನೂ ಎದುರಿಸಬೇಕಾಗಿದೆ. ಇಂತಹ ಸಂದರ್ಭದಲ್ಲಿ ಒಬ್ಬರಿಗೊಬ್ಬರು ಸಹಾಯಕರಾಗಿರಬೇಕು. ಸೋಂಕಿತರಿಗೆ ಮಾನಸಿಕ ಧೈರ್ಯ ತುಂಬುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ದುಶ್ಚಟಗಳಿಂದ ದೂರವಿದ್ದು, ನಿಯಮಿತ ಆಹಾರ ವಿಹಾರಗಳನ್ನು ಮಾಡುವುದರಿಂದ ಈ ರೋಗವನ್ನು ಹತೋಟಿಯಲ್ಲಿ ಇಡಬಹುದು. ಮುಂದಿನ ದಿನಗಳಲ್ಲಿ ತಮ್ಮ ಗ್ರಾಮದಲ್ಲಿ ಯಾರಿಗೇ ಆದರೂ ರೋಗ ಲಕ್ಷಣಗಳು ಕಂಡು ಬಂದರೆ ಅವರನ್ನು ಗೌರವದಿಂದ ಕಾಣಿರಿ ಎಂದು ಡಾ. ಸುನೀಲ ಹಿರೇಮಠ ತಿಳಿಸಿದರು.