ಹಾವೇರಿ: ಸಿದ್ಧರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಮಧ್ಯೆ ಸಿಎಂ ಕುರ್ಚಿ ವಾರ್ ವಿಚಾರ ಕುರಿತಂತೆ ಕೇಳಿದ ಪ್ರಶ್ನೆಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗರಂ ಆದರು. ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಮಡ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಯಾರ್ಯಾರೋ ಕಾಮೆಂಟ್ ಮಾಡ್ತಾರೆ ಎಂದ್ರೆ ನಾ ರಿಪ್ಲೈ ಮಾಡೋಕೆ ಆಗುತ್ತಾ? ಎಂದು ಉತ್ತರ ನೀಡಲು ನಿರಾಕರಿಸಿದರು. ಪತ್ರಕರ್ತರ ಪ್ರಶ್ನೆಗೆ ಸಿಡಿಮಿಡಿಗೊಂಡ ಮಾಜಿ ಸಿಎಂ ಮಾತನಾಡೋಕೆ, ಹೇಳೋಕೆ ಬಹಳ ವಿಷಯಗಳಿವೆ, ಅವುಗಳನ್ನು ಕೇಳಿ ಎಂದರು.
ವಿದ್ಯುತ್ ದರ ಹೆಚ್ಚಾದ ಕಾರಣ ಜನರು ಬಿಲ್ ಕಟ್ಟದಿದ್ದರೆ ಕರೆಂಟ್ ಪೂರೈಕೆ ಆಗುವುದಿಲ್ಲ. ರಾಜ್ಯದಲ್ಲಿ ಮಳೆ ಇಲ್ಲ, ಬರ ಆಗಿದೆ. ರೈತರು ಹಾಗೂ ಜನರಿಗೆ ಕುಡಿಯುವ ನೀರಿಗೆ ಸಮಸ್ಯೆ ಆಗಿದೆ. ಜನಗಳಿಗೆ ಕುಡಿಯುವ ನೀರು ಸರಬರಾಜು ಆಗಲು ವಿದ್ಯುತ್ ಬೇಕು. ಬೋರ್ ವೆಲ್ಗಳಿಂದ ಹಾಗೂ ಅನೇಕ ಕೆಲಸಗಳಿಗೆ ವಿದ್ಯುತ್ ಬೇಕೆ ಬೇಕು. ಕರೆಂಟ್ ನೀಡದಿದ್ದರೆ ಕುಡಿಯುವ ನೀರಿಗೆ ಹಾಹಾಕಾರ ಆಗುತ್ತದೆ ಎಂದು ಬೊಮ್ಮಾಯಿ ಆತಂಕ ವ್ಯಕ್ತಪಡಿಸಿದರು.
ಹೈಡ್ರೊ ಎಲೆಕ್ಟ್ರಿಕ್ ಪವರ್ ಕೊರತೆ ಇದೆ. ಹೀಗಾಗಿ ವಿದ್ಯುತ್ ಇಲಾಖೆಯ ಎಲ್ಲ ನಿಗಮಗಳಿಗೆ ಹಣ ಬಿಡುಗಡೆ ಮಾಡಬೇಕು. ಇವರು ಸರಿಯಾದ ಕ್ರಮ ತೆಗೆದುಕೊಳ್ಳದಿದ್ದರೆ, ವಿದ್ಯುತ್ ಶಕ್ತಿಯ ಕ್ಷಾಮ ಉಂಟಾಗುತ್ತದೆ ಎಂದು ಬೊಮ್ಮಾಯಿ ಎಚ್ಚರಿಕೆ ನೀಡಿದರು.
ಬೊಮ್ಮಾಯಿ ಕಾಲಿಗೆ ಬಿದ್ದ ದಂಪತಿ: ಇದೇ ವೇಳೆ, ತಮ್ಮ ಮಗಳ ಸಾವಿಗೆ ನ್ಯಾಯ ಒದಗಿಸುವಂತೆ ಬಡ ದಂಪತಿ ಮಾಜಿ ಸಿಎಂ ಬೊಮ್ಮಾಯಿ ಕಾಲಿಗೆರಗಿದ ಘಟನೆ ಸಹ ನಡೆಯಿತು. ಪುತ್ರಿಯ ಸಾವಿಗೆ ನ್ಯಾಯ ಕೊಡಿಸುವಂತೆ ದಂಪತಿಗಳು ಅಂಗಲಾಚಿದರು.
ಪ್ರಕರಣದ ವಿವರ: ಡಿಸೆಂಬರ್ 8 2019 ರಂದು ದ್ಯಾಮವ್ವ ಎಂಬ ವಿದ್ಯಾರ್ಥಿನಿ ಸಾವನ್ನಪ್ಪಿದ್ದಳು. ಶಿಗ್ಗಾಂವಿ ತಾಲೂಕು ಕುನ್ನೂರು ಗ್ರಾಮದ ಕಸ್ತೂರ್ ಬಾ ಹಾಸ್ಟೆಲ್ನಲ್ಲಿ ಅನುಮಾನಾಸ್ಪದವಾಗಿ ದ್ಯಾಮವ್ವ ಸಾವನ್ನಪ್ಪಿದ್ದಳು. ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಶವ ಪತ್ತೆಯಾಗಿತ್ತು.
ದ್ಯಾಮವ್ವ ಸಾವಕ್ಕ ಹಾಗೂ ಅಶೋಕ್ ಮರಿಲಿಂಗಪ್ಪನವರ ದಂಪತಿ ಪುತ್ರಿ. ಈಕೆಯ ಸಾವು ಆತ್ಮಹತ್ಯೆಯಲ್ಲ, ಕೊಲೆ ಎಂದು ಪೋಷಕರು ಶಂಕೆ ವ್ಯಕ್ತಪಡಿಸಿದರು. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ, ಈವರೆಗೆ ಸೂಕ್ತ ತನಿಖೆ ಆಗಿಲ್ಲ ಎಂದು ದಂಪತಿ ಆರೋಪಿಸಿದರು. ಮಗಳ ಸಾವಿಗೆ ನ್ಯಾಯ ಕೊಡಿಸಿ ಎಂದು ದಂಪತಿ ಮಾಜಿ ಸಿಎಂಗೆ ಮನವಿ ಮಾಡಿದರು. ದಂಪತಿಯ ನೋವು ಆಲಿಸಿದ ಬೊಮ್ಮಾಯಿ ಸಿಐಡಿ ತನಿಖೆಗೆ ಆದೇಶಿಸಿರುವುದಾಗಿ ತಿಳಿಸಿದರು. ನ್ಯಾಯ ಸಿಗಲಿದೆ ಎಂದು ಬೊಮ್ಮಾಯಿ ಭರವಸೆ ನೀಡಿದರು.
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದ ಜನಪ್ರಿಯತೆ ಬಹಳ ದಿನ ಉಳಿಯಲ್ಲ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ