ಹಾವೇರಿ:ದೀಪಗಳ ಹಬ್ಬ ದೀಪಾವಳಿ ಬಂತೆಂದ್ರೆ ಹಾವೇರಿ ಜಿಲ್ಲೆಯಲ್ಲಿ ದನ ಬೆದರಿಸುವ ಸ್ಪರ್ಧೆಯ ಅಭಿಮಾನಿಗಳಿಗೆ ಎಲ್ಲಿಲ್ಲದ ಸಂಭ್ರಮ. ಜಿಲ್ಲೆಯ ಜಾನಪದ ಸೊಗಡಿನ ಕ್ರೀಡೆಗಳಲ್ಲಿ ಒಂದಾಗಿರುವ (ಹೋರಿ) ದನ ಬೆದರಿಸುವ ಸ್ಪರ್ಧೆಗೆ ದೀಪಾವಳಿ ಬಲಿಪಾಡ್ಯಮಿ ದಿನ ವಿದ್ಯುಕ್ತ ಚಾಲನೆ ಸಿಗುತ್ತದೆ.
ಹಾವೇರಿ ನಗರದ ವೀರಭದ್ರೇಶ್ವರ ದೇವಸ್ಥಾನ ಸಮಿತಿ ಆಶ್ರಯದಲ್ಲಿ ದನ ಬೆದರಿಸುವ ಸ್ಪರ್ಧೆ ಆಯೋಜನೆ ಮಾಡಲಾಗಿತು. ಹಾವೇರಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಸುಮಾರು ಎರಡು ನೂರಕ್ಕೂ ಅಧಿಕ ಹೋರಿಗಳು ಸ್ಫರ್ಧೆಯಲ್ಲಿ ಭಾಗವಹಿಸಿದ್ದವು. ನಗರದ ಹಳೆಯ ಗ್ರಂಥಾಲಯದ ಸ್ಥಳದಿಂದ ಕೊಬ್ಬರಿ ಕಟ್ಟಿದ ಹೋರಿಗಳನ್ನ ಓಡಿಸಲಾಯಿತು. ಸ್ಪರ್ಧೆಯಲ್ಲಿ ಗೇಟು ತೆರೆಯುತ್ತಿದ್ದಂತೆ ಹೋರಿಗಳ ನಾಗಾಲೋಟದಲ್ಲಿ ಓಡಿದವು. ಹೋರಿಗಳು ಓಡುತ್ತಿದ್ದಂತೆ ಹೋರಿ ಬಾವುಟಗಳು, ಹೆಸರಿನ ನಾಮಪಲಕಗಳು ಪರಸೆಯಲ್ಲಿ ರಾರಾಜಿಸಿದವು. ಕ್ಷಣ ಮಾತ್ರದಲ್ಲಿ ಮಿಂಚಿ ಮರೆಯಾಗುತ್ತಿದ್ದ ಹೋರಿಗಳನ್ನು ಹಿಡಿಯಲು ಪೈಲ್ವಾನರು ಸನ್ನದ್ದರಾಗಿ ನಿಂತಿದ್ದರು.
ರಭಸವಾಗಿ ಓಡಿ ಬರುತ್ತಿದ್ದ ಹೋರಿಗಳನ್ನು ಹಿಡಿದು ಅದರ ಮೈಮೇಲೆ ಕಟ್ಟಲಾಗಿದ್ದ ಕೊಬ್ಬರಿ ಹರಿಯಲು ಯುವಕರ ದಂಡೆ ನೆರದಿತ್ತು. ಕೆಲ ಹೋರಿಗಳ ಪೈಲ್ವಾನರ ಕೈಚಳಕಕ್ಕೆ ಸಿಕ್ಕು ಮೈಮೇಲಿನ ಕೊಬ್ಬರಿ ಹರಿಸಿಕೊಂಡವು. ಇನ್ನು ಕೆಲ ಹೋರಿಗಳು ಶರವೇಗದಲ್ಲಿ ಓಡಿ ಪೈಲ್ವಾನರ ಕೈಗೆ ಸಿಗದೇ ನಿಗದಿಪಡಿಸಿದ ಸ್ಥಳದವರೆಗೆ ಓಡಿ ಪಾಸಾದವು.
ಮನರಂಜನೆಗೆ ದನಬೆದರಿಸುವ ಸ್ಪರ್ಧೆ ಆಯೋಜನೆ: ಹಾವೇರಿ ಜಿಲ್ಲೆಯಲ್ಲಿ ದೀಪಾವಳಿಯೊಂದಿಗೆ ಕ್ರೀಡೆ ದನಬೆದರಿಸುವ ಸ್ಪರ್ಧೆ ಆರಂಭವಾಗುತ್ತದೆ. ಇದಕ್ಕೆ ಸ್ಥಳೀಯವಾಗಿ ಕೊಬ್ಬರಿ ಓಡಿಸುವ ಸ್ಪರ್ಧೆ ಹಟ್ಟಿಹಬ್ಬ ಎಂತಲೂ ಕರೆಯುವ ವಾಡಿಕೆ. ದೀಪಾವಳಿ ಬಲಿಪಾಡ್ಯಮಿ ದಿನ ಹಾವೇರಿಯಲ್ಲಿ ಯಾವುದೇ ಬಹುಮಾನಗಳಿಲ್ಲದೇ ಕೇವಲ ಮನರಂಜನೆಗೆ ದನಬೆದರಿಸುವ ಸ್ಪರ್ಧೆ ನಡೆಯಿತು. ಈ ಸ್ಫರ್ಧೆಯ ಅಖಾಡದಲ್ಲಿ ಇಳಿಯುವ ಹೋರಿಗಳಿಗೆ ರಿಹರ್ಸಲ್ ತರ ಇದ್ದು ಈ ಅಖಾಡದಲ್ಲಿ ಪ್ರಥಮ ಬಾರಿಗೆ ಓಡಿಸಲಾಗುತ್ತದೆ.
ಸುಗ್ಗಿ ಮುಗಿದ ಬಳಿಕ ಹೋರಿಗಳಿಗೆ ವಿಶೇಷ ತಾಲೀಮು: ಸುಗ್ಗಿಯ ದಿನಗಳ ನಂತರ ಯುವಕರು ರೈತರು ಈ ಹೋರಿಗಳನ್ನು ಕೊಬ್ಬರಿ ಹೋರಿ ಹಬ್ಬಕ್ಕೆ ಎಂತಲೇ ಸಿದ್ದಪಡಿಸುವರು. ಬೆಳಗ್ಗೆ ಬೇಗನೆ ಎದ್ದು ಹೋರಿಗಳಿಗೆ ವಾಕಿಂಗ್ ಮಾಡಿಸಲಾಗುತ್ತದೆ. ಸುಮಾರು 10 ಕಿ ಮೀಟರ್ ವರೆಗೆ ಓಡಿಸಲಾಗುತ್ತದೆ. ಅಲ್ಲದೇ ತುಂಬಿದ ಕೆರೆಯ ಒಂದು ದಡದಿಂದ ಇನ್ನೊಂದು ದಡಕ್ಕೆ ಈಜು ಮಾಡಿಸಿ ಹೋರಿಗಳಿಗೆ ದಮ್ಮು ಹತ್ತದಂತೆ ತರಬೇತಿ ನೀಡಲಾಗುತ್ತದೆ. ಇಷ್ಟೆಲ್ಲ ಸಿದ್ದತೆ ಮಾಡಿದ ನಂತರ ಹೋರಿಗಳನ್ನು ಸ್ಪರ್ಧೆಯ ಅಖಾಡಕ್ಕೆ ಬಿಡಲಾಗುತ್ತದೆ.
ಹೋರಿಗಳಿಗೆ ಕೇವಲ ತಾಲೀಮು ಅಷ್ಟೇ ಅಲ್ಲ, ಇನ್ನಷ್ಟು ಬಲಿಷ್ಠವಾಗಲೂ ಪೌಷ್ಟಿಕ ಆಹಾರ ನೀಡಲಾಗುತ್ತದೆ. ಹತ್ತಿಕಾಳು ಹುರುಳಿಬೀಜ, ಹಿಂಡಿ ಬೂಸಾ ಮೊಟ್ಟೆ ಸೇರಿದಂತೆ ವಿವಿಧ ಆಹಾರ ತಿನ್ನಿಸಿ ಹೋರಿಗಳನ್ನ ಸ್ಪರ್ಧೆಗೆ ಸಿದ್ದಗೊಳಿಸಲಾಗುತ್ತದೆ. ಇನ್ನು ದನ ಬೆದರಿಸುವ ಸ್ಪರ್ಧೆ ದಿನ ಹೋರಿಗಳಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ. ಕೊಂಬುಗಳಿಗೆ ಕೊಂಬಣಸು, ಎತ್ತಿನ ಮೈಮೇಲೆ ಜೋಲಾ, ಕೋಡುಗಳಿಗೆ ಕಟ್ಟು ಹಾಕಿಸಿ ನಿಶಾನೆ ಕಟ್ಟಲಾಗುತ್ತದೆ. ಮೈತುಂಬ ಕೊಬ್ಬರಿಯ ಕಟ್ಟಿ ಅಲಂಕರಿಸಲಾಗುತ್ತದೆ. ಬಲೂನ್ಗ ಳನ್ನ ಆಳೆತ್ತರದವರೆಗೆ ಕಟ್ಟಲಾಗುತ್ತದೆ.
ಸ್ಪರ್ಧೆಯಲ್ಲಿ ಕೊಬ್ಬರಿ ಹರಿಸಿಕೊಳ್ಳದ ಹೋರಿ ಜಯಿಸಿದಂತೆ:ಸ್ಪರ್ಧೆಯಲ್ಲಿ ಹೋರಿಗೆ ಕಟ್ಟಿದ ಕೊಬ್ಬರಿಯನ್ನು ಜನರಿಂದ ಹರಿಸಿಕೊಳ್ಳದೇ ಪಾರಾಗಿ ಬಂದರೆ ಹೋರಿಯ ಜಯಸಿದಂತೆ. ಪರಸಿಯಲ್ಲಿ ಹೋರಿ ಓಡಿ ಬರುವಾಗ ಯಾರಾದರೂ ಮೈಮೇಲಿನ ಕೊಬ್ಬರಿ ಹರಿದುಕೊಂಡರೆ ಹೋರಿ ಸ್ಪರ್ಧೆಯಲ್ಲಿ ಸೋತಂತೆ. ಒಟ್ಟಾರೆ ದೀಪಾವಳಿಯಿಂದ ಆರಂಭ ಆಗುವ ದನಬೆದರಿಸುವ ಸ್ಪರ್ಧೆಗಳು ಮನರಂಜನೆ ಜೊತೆಗೆ ಹೋರಿಗಳಿಗೆ ಹೆಚ್ಚು ಮೌಲ್ಯವನ್ನು ಈ ಸ್ಪರ್ಧೆ ತಂದುಕೊಡುತ್ತದೆ.
ಇದನ್ನೂಓದಿ:ಬೆಳಕಿನ ಹಬ್ಬ ದೀಪಾವಳಿ ಆಚರಿಸಲು ದಾವಣಗೆರೆ ಮಂದಿಗೆ ಬೇಕು ಎರಡು ಕೋಟಿ ಮೌಲ್ಯದ ಪಟಾಕಿ..