ಹಾವೇರಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯದಲ್ಲಿ ಲೋಕಸಭೆ ಚುನಾವಣೆ ಪ್ರಚಾರಕ್ಕೆ ರಣಕಹಳೆ ಮೊಳಗಿಸಿದ್ದಾರೆ. ಹಾವೇರಿಯಲ್ಲಿ ಬೃಹತ್ ಕಾಂಗ್ರೆಸ್ ಸಮಾವೇಶದಲ್ಲಿ ರಾಹುಲ್ ಪಾಲ್ಗೊಂಡಿದ್ದಾರೆ. ಹಾವೇರಿಯ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ರಾಹುಲ್ಗೆ ಅದ್ಧೂರಿ ಸ್ವಾಗತ ನೀಡಲಾಯಿತು.
ಸಮಾವೇಶದ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ ವಿಶೇಷ ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಲಾಗಿದೆ. 1 ಲಕ್ಷಕ್ಕೂ ಹೆಚ್ಚು ಜನ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ. ರಾಹುಲ್ ಜತೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಮಾಜಿ ಸಿ ಎಂ ಸಿದ್ದರಾಮಯ್ಯ, ಡಿಸಿಎಂ ಡಾ. ಜಿ. ಪರಮೇಶ್ವರ್, ಲೋಕಸಭೆ ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ವಿವಿಧ ಸಚಿವರು, ಶಾಸಕರು ಪಾಲ್ಗೊಂಡಿದ್ದಾರೆ.
- " class="align-text-top noRightClick twitterSection" data="">
ಮಿಂಚುತ್ತಿದ್ದಾರೆ ಪ್ರಿಯಾಂಕ:
ರಾಹುಲ್ ಗಾಂಧಿ ಪಾಲ್ಗೊಳ್ಳುತ್ತಿರುವ ಸಮಾವೇಶದಲ್ಲಿ ಹಾವೇರಿ, ಗದಗ ಎರಡೂ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಅಭಿಮಾನಿಗಳು ಆಗಮಿಸಿದ್ದಾರೆ. ವಿಶೇಷ ಅಂದರೆ ಉತ್ತರ ಪ್ರದೇಶದ ಒಂದು ಭಾಗದ ಉಸ್ತುವಾರಿಯಾಗಿರುವ ಪ್ರಿಯಾಂಕ ಗಾಂಧಿ ಅವರ ಬೃಹತ್ ಪೋಸ್ಟರ್ಗಳು, ಬ್ಯಾನರ್ಗಳು ಹಾವೇರಿಯಲ್ಲಿ ರಾರಾಜಿಸುತ್ತಿರುವುದು ವಿಶೇಷವಾಗಿ ಗಮನ ಸೆಳೆಯುತ್ತಿದೆ.
ಲೋಕಸಭೆ ಚುನಾವಣೆ ರಣಕಹಳೆ:
ಲೋಕಸಭೆ ಚುನಾವಣೆ ದಿನಾಂಕ ಘೋಷಣೆಗೆ ಮುನ್ನವೇ ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಭೇಟಿಕೊಟ್ಟು ಚುನಾವಣಾ ಪ್ರಚಾರದ ರಣಕಹಳೆ ಮೊಳಗಿಸುತ್ತಿದ್ದಾರೆ. ಮೂರು ದಿನದ ಹಿಂದೆ ಪ್ರಧಾನಿ ನರೇಂದ್ರ ಮೋದಿ ಕಲಬುರ್ಗಿಗೆ ಆಗಮಿಸಿ ಸಮಾವೇಶದಲ್ಲಿ ಪಾಲ್ಗೊಂಡು ತೆರಳಿದ್ದಾರೆ. ಈ ಹಿಂದೆ ಹುಬ್ಬಳ್ಳಿಗೂ ಭೇಟಿ ಕೊಟ್ಟಿದ್ದರು. ಒಟ್ಟಾರೆ ರಾಷ್ಟ್ರೀಯ ಪಕ್ಷಗಳಿಗೆ ಕರ್ನಾಟಕದಿಂದ ಹೆಚ್ಚು ಸ್ಥಾನ ಗೆಲ್ಲುವುದು ಪ್ರಮುಖವಾಗಿದ್ದು, ಮೇಲಿಂದ ಮೇಲೆ ರಾಷ್ಟ್ರೀಯ ನಾಯಕರು ಭೇಟಿ ಕೊಟ್ಟು ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಮೈತ್ರಿ ಗಟ್ಟಿಗೊಳಿಸುವ ಯತ್ನ:
ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಅಷ್ಟೊಂದು ಬಲ ಹೊಂದಿಲ್ಲ. ಆದ್ದರಿಂದ ಇಂದಿನ ಸಮಾವೇಶದಲ್ಲಿ ರಾಹುಲ್ ಗಾಂಧಿ ಜೆಡಿಎಸ್ ಜತೆಗಿನ ತಮ್ಮ ಮೈತ್ರಿಯನ್ನು ಹೆಚ್ಚಾಗಿ ಪ್ರಸ್ತಾಪಿಸುವ ಸಾಧ್ಯತೆ ಇದೆ. ಜೆಡಿಎಸ್ ಜತೆ ಕೈಜೋಡಿಸಿರುವ, ಅವರಿಗೆ ಕೆಲವಷ್ಟು ಸ್ಥಾನ ಬಿಟ್ಟುಕೊಟ್ಟಿರುವ ಬಗ್ಗೆ ಮಾಹಿತಿ ನೀಡುವ ಮೂಲಕ ಈ ಭಾಗದ ಮತದಾರರಿಗೆ ಮೈತ್ರಿಯ ಬದ್ಧತೆಯನ್ನು ತಿಳಿಸುವ ಸಾಧ್ಯತೆ ಹೆಚ್ಚಾಗಿದೆ.