ಹಾವೇರಿ: ರಾಣೆಬೇನ್ನೂರ ನಗರದಲ್ಲಿ 121 ಕೋಟಿ ರೂಪಾಯಿ ವೆಚ್ಚದ 24x7 ಕುಡಿಯುವ ನೀರಿನ ಯೋಜನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಿದರು. ಸಿದ್ದೇಶ್ವರ ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಕುಡಿಯುವ ನೀರಿನ ಸಂಗ್ರಹಣಾ ಘಟಕದಲ್ಲಿ ಈ ಯೋಜನೆಗೆ ಚಾಲನೆ ನೀಡಿದರು.
ಇದು ನಗರದ ಜನರಿಗೆ 24 ಗಂಟೆಗಳ ಕಾಲ ನೀರು ಒದಗಿಸುವ ಯೋಜನೆಯಾಗಿದೆ. ನಗರದಲ್ಲಿ ನೀರಿನ ಕೊರತೆಯಾಗಬಾರದೆಂಬ ಉದ್ದೇಶದಿಂದ ತಾಲೂಕಿನ ಮುದೇನೂರು ಗ್ರಾಮದ ತುಂಗಭದ್ರಾ ನದಿಯಿಂದ ನೀರನ್ನು ನಗರಕ್ಕೆ ತರಲಾಗಿದೆ. ಈ ನೀರನ್ನು ಮೂರು ಘಟಕಗಳು ಮೂಲಕ ಶುದ್ಧೀಕರಿಸುವ ಮೂಲಕ ಜನರಿಗೆ ಬಿಡಲಾಗುತ್ತದೆ.
ಸಿಎಂಗೆ 2 ಲಕ್ಷ ಮೌಲ್ಯದ ಗಂಧದ ಮೂರ್ತಿ ನೀಡಿದ ನಗರಸಭೆ:
ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ರಾಣೆಬೇನ್ನೂರು ನಗರಸಭೆ ವತಿಯಿಂದ ಗಂಧದ ಮರದಿಂದ ಮಾಡಿಸಿದ ಮೂರ್ತಿಯನ್ನು ನೀಡಿ ಗೌರವಿಸಲಾಯಿತು. ಇದು ಸುಮಾರು 18 ಕೆಜಿ ಇದೆ. ಸುಮಾರು 2 ಲಕ್ಷ ರೂಪಾಯಿ ಮೌಲ್ಯದಾಗಿದೆ. ಕಾರ್ಯಕ್ರಮದಲ್ಲಿ ಸಂಸದ ಶಿವಕುಮಾರ ಉದಾಸಿ, ಸಚಿವರಾದ ಬಿ.ಸಿ.ಪಾಟೀಲ, ಗೋವಿಂದ ಕಾರಜೋಳ, ಬೈರತಿ ಬಸವರಾಜ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಭಾಗಿಯಾಗಿದ್ದರು.
ಆದಷ್ಟು ಬೇಗ ಮಕ್ಕಳಿಗೆ ಕೋವಿಡ್ ಲಸಿಕೆ:
ಸದ್ಯ12 ರಿಂದ 18 ವರ್ಷದವರಿಗೆ ಕೊರೊನಾ ಲಸಿಕೆ ಹಾಕುವ ಕುರಿತಂತೆ ಈಗ ತಾನೆ ಒಪ್ಪಿಗೆ ಸಿಕ್ಕಿದೆ. ಆದಷ್ಟು ಬೇಗ ಲಸಿಕೆಯ ಆದ್ಯತೆ ಮೇರೆಗೆ ಹಾಕಲಾಗುವುದು ಎಂದು ಸಿಎಂ ತಿಳಿಸಿದರು.
ಹಾವೇರಿಯ ಜಂಗಮನಕೊಪ್ಪದ ಬಳಿ ಹಾಲು ಸಂಸ್ಕರಣಾ ಘಟಕಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಸಿಎಂ, ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಲು ಒತ್ತು ನೀಡಲಾಗಿದೆ. ಇದೇ 30 ರಂದು ತಜ್ಞರ ಸಭೆ ಕರೆಯಲಾಗಿದ್ದು, ಅವರ ಅಭಿಪ್ರಾಯ ಮತ್ತು ರಾಜ್ಯದಲ್ಲಿನ ಪಕ್ಕದ ರಾಜ್ಯಗಳ ಕೊರೊನಾ ಸ್ಥಿತಿ ನೋಡಿ 8 ರಿಂದ ತರಗತಿ ಆರಂಭಿಸುವ ಕುರಿತಂತೆ ನಿರ್ಧಾರ ಕೈಗೊಳ್ಳುವದಾಗಿ ಬೊಮ್ಮಾಯಿ ತಿಳಿಸಿದರು.
ಮೈಸೂರು ಅತ್ಯಾಚಾರ ಪ್ರಕರಣ ಕುರಿತಂತೆ ಸಚಿವರ ಹೇಳಿಕೆಗಳ ಕುರಿತಂತೆ ಸಚಿವ ಸಂಪುಟದಲ್ಲಿ ಮಾತನಾಡುವುದಾಗಿ ಬೊಮ್ಮಾಯಿ ತಿಳಿಸಿದರು.
ಅಫ್ಘಾನಿಸ್ತಾನದಲ್ಲಿರುವ ಕನ್ನಡಿಗರ ರಕ್ಷಣೆ ಮಾಡಿದ್ದೇವೆ. ಇನ್ನು ಯಾರಾದರೂ ಅಲ್ಲಿ ತೊಂದರೆಗೊಳಗಾಗಿದ್ದರೆ, ಅವರ ರಕ್ಷಣೆ ಮಾಡಲು ಕೇಂದ್ರ ಸರ್ಕಾರದ ಜೊತೆ ಮಾತನಾಡುವುದಾಗಿ ತಿಳಿಸಿದರು.
ಓದಿ: ಜಮೀನು ವಿವಾದಕ್ಕೆ ಒಂದೇ ಕುಟುಂಬದ ನಾಲ್ವರ ಕೊಲೆ: ಬೆಚ್ಚಿಬಿದ್ದ ಜಮಖಂಡಿ ಜನ