ಹಾವೇರಿ : ಇಲ್ಲಿನ ಜಿಲ್ಲಾಸ್ಪತ್ರೆ ಅವರಣದಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಿನನಿತ್ಯ ಇನ್ನೂರಕ್ಕೂ ಅಧಿಕ ರೋಗಿಗಳು ಆಗಮಿಸುತ್ತಾರೆ. ಅದರಲ್ಲೂ ನೂರಕ್ಕೂ ಅಧಿಕ ಗರ್ಭಿಣಿಯರು ಮಹಿಳಾ ಮತ್ತ ಮಕ್ಕಳ ಆಸ್ಪತ್ರೆಗೆ ಆಗಮಿಸಿ ಚಿಕಿತ್ಸೆ ಪಡೆಯುತ್ತಾರೆ. ಆದರೆ ಈ ಆಸ್ಪತ್ರೆಯಲ್ಲಿ ಕಳೆದ ಎರಡು ತಿಂಗಳುಗಳಿಂದ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಕಾರ್ಯನಿವರ್ಹಿಸುತ್ತಿಲ್ಲ. ಪರಿಣಾಮ ಬಡ ಗರ್ಭಿಣಿಯರು ಸ್ಕ್ಯಾನಿಂಗ್ ಮಾಡಿಸಿಕೊಳ್ಳಲು ಖಾಸಗಿ ಆಸ್ಪತ್ರೆ ಮತ್ತು ಸೆಂಟರ್‌ಗಳಿಗೆ ತೆರಳುವ ಅನಿವಾರ್ಯತೆ ಉಂಟಾಗಿದೆ.
ಖಾಸಗಿ ಆಸ್ಪತ್ರೆ ಮತ್ತು ಸೆಂಟರ್‌ಗಳಿಗೆ ತೆರಳುವ ಬಡ ಮಹಿಳೆಯರು ಪ್ರತಿಸಾರಿ ಸ್ಕ್ಯಾನಿಂಗ್ ಮಾಡಿಸಲು ಹೆಚ್ಚಿನ ಮೊತ್ತವನ್ನು ಪಾವತಿಸುವ ಅನಿವಾರ್ಯತೆ ಎದುರಾಗಿದೆ. ಮೊದಲು ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲ ಉಚಿತವಾಗಿ ಸಿಗುತ್ತಿತ್ತು. ಆದರೆ ಕಳೆದ ಎರಡು ತಿಂಗಳುಗಳಿಂದ ಸ್ಕ್ಯಾನಿಂಗ್ ಘಟಕ ಬಂದ್ ಆಗಿರುವುದರಿಂದ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ. ಇದರಿಂದ ಇಲ್ಲಿಯ ವೈದ್ಯರು ಖಾಸಗಿ ಆಸ್ಪತ್ರೆ ಮತ್ತು ಸೆಂಟರ್‌ಗಳಿಗೆ ತೆರಳುವಂತೆ ಸೂಚಿಸುತ್ತಿದ್ದಾರೆ ಎಂದು ರೋಗಿಗಳು ಹೇಳಿದ್ದಾರೆ.
ಗರ್ಭಿಣಿಯಾದಾಗಿನಿಂದ ಹೆರಿಗೆಯಾಗುವವರೆಗೆ ಒಟ್ಟು ಐದು ಬಾರಿ ಸ್ಕ್ಯಾನಿಂಗ್ ಮಾಡಿಸಬೇಕಾಗುತ್ತದೆ. ಸರ್ಕಾರಿ ಆಸ್ಪತ್ರೆಯ ಸ್ಕ್ಯಾನಿಂಗ್ ಘಟಕ ಮುಚ್ಚಿರುವುದರಿಂದ ಬಡ ಗರ್ಭಿಣಿಯರಿಗೆ ಸಮಸ್ಯೆ ಉಂಟಾಗುತ್ತಿರುವುದಾಗಿ ದೂರಿದ್ದಾರೆ. ಈ ಕುರಿತಂತೆ ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿ ಡಾ.ಪರಮೇಶ್ ಹಾವನೂರು ಬಳಿ ಕೇಳಿದರೆ ಜಿಲ್ಲೆಯಲ್ಲಿ ಏಕೈಕ ರೆಡಿಯಾಲಾಜಿಸ್ಟ್ ಹುದ್ದೆ ಇದೆ. ಅವರು ರಜೆ ಮೇಲೆ ಹೋದಾಗಲೆಲ್ಲಾ ಈ ಸಮಸ್ಯೆಯಾಗುತ್ತಿರುವುದಾಗಿ ಹೇಳಿದ್ದಾರೆ.
ಪ್ರತಿನಿತ್ಯ 70ಕ್ಕೂ ಅಧಿಕ ಗರ್ಭಿಣಿಯರು ಆಸ್ಪತ್ರೆಗೆ ಬರುತ್ತಾರೆ. ಅದರಲ್ಲಿ ಪ್ರತಿಶತ 75 ರಷ್ಟು ಗರ್ಭಿಣಿಯರಿಗೆ ಸ್ಕ್ಯಾನಿಂಗ್ ಮಾಡಿಸಲಾಗುತ್ತದೆ. ಸದ್ಯ ರೆಡಿಯಾಲಾಜಿಸ್ಟ್ ಅನಾರೋಗ್ಯದ ಕಾರಣದಿಂದ ರಜೆ ಮೇಲೆ ಇದ್ದಾರೆ. ಹೀಗಾಗಿ ಸ್ಕ್ಯಾನಿಂಗ್ ಸೆಂಟರ್ ಬಂದ್ ಮಾಡಲಾಗಿದೆ. ಅವರು ಇದೇ 29 ರಂದು ಕರ್ತವ್ಯಕ್ಕೆ ಹಾಜರಾಗಲಿದ್ದು, ಸಮಸ್ಯೆ ನಿವಾರಣೆಯಾಗಲಿದೆ ಎಂದಿದ್ದಾರೆ.
ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜ್ ಆರಂಭವಾದರೆ ರೆಡಿಯಾಲಾಜಿಸ್ಟ್ ಗಳ ಕೊರತೆ ನೀಗಲಿದೆ. ಇದರಿಂದ ಈ ಸಮಸ್ಯೆ ಕಡಿಮೆಯಾಗಲಿದೆ ಎಂದು ಡಾ.ಪರಮೇಶ್ ತಿಳಿಸಿದ್ದಾರೆ. ಅಧಿಕಾರಿಗಳು ಜನಪ್ರತಿನಿಧಿಗಳು ಈ ಕಡೆ ಗಮನ ನೀಡಿ ಸ್ಕ್ಯಾನಿಂಗ್ ಸೆಂಟರ್ ಆರಂಭಿಸುವ ಮೂಲಕ ಬಡ ಗರ್ಭಿಣಿಯರ ಸಮಸ್ಯೆಗೆ ಸ್ಪಂದಿಸುವಂತೆ ರೋಗಿಗಳ ಸಂಬಂಧಿಕರು ಒತ್ತಾಯಿಸಿದ್ದಾರೆ.
ಓದಿ : ಕಲ್ಯಾಣ ಕರ್ನಾಟಕದಲ್ಲಿ 42 ಡಿಗ್ರಿ ದಾಖಲೆಯ ಉಷ್ಣಾಂಶ: ರಣ ಬಿಸಿಲಿಗೆ ಬಿಸಿಲೂರು ಜನತೆ ಹೈರಾಣು