ಹಾವೇರಿ: ಟಂಟಂ ವಾಹನಕ್ಕೆ ಕ್ಯಾಂಟರ್ ಡಿಕ್ಕಿಯಾದ ಪರಿಣಾಮ ಟಂಟಂನಲ್ಲಿದ್ದ ಮಹಿಳೆ ಸ್ಥಳದಲ್ಲೇ ಸಾವುನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆ. ಮೃತ ಮಹಿಳೆಯನ್ನ 36 ವರ್ಷದ ಹುಲಿಗೆಮ್ಮ ಸರಾವರಿ ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ ಪ್ರೀತಿ ದಳವಾಯಿ (18), ಜ್ಯೋತಿ ಹರಕುಣಿ (20), ಹನುಮವ್ವ ಸತ್ತೆಮ್ಮನವರ (30), ನಾಗಮ್ಮ ಮಾಳಗಿ (42), ಮತ್ತು ಭಾಗ್ಯ ಸರಾವರಿ (14) ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಗುಂಡೇನಹಳ್ಳಿ ಗ್ರಾಮದಿಂದ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಮೆಣಸಿನಕಾಯಿ ತುಂಬು ತೆಗೆಯೋ ಕೆಲಸಕ್ಕೆ ಮಹಿಳೆಯರು ಹೋಗುತ್ತಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಬ್ಯಾಡಗಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬ್ಯಾಡಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.