ಹಾವೇರಿ: ಜನವರಿ 22ರಂದು ಉತ್ತರ ಪ್ರದೇಶದ ಆಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ಉದ್ಘಾಟನೆಯಾಗಲಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿರುವ ಇತರೆ ರಾಮಮಂದಿರಗಳಲ್ಲೂ ವಿಶೇಷ ಪೂಜೆ-ಪುನಸ್ಕಾರ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಪತ್ನಿ ಸೀತೆಯನ್ನರಿಸಿ ಲಂಕಾಕ್ಕೆ ತೆರಳುವ ಮುನ್ನ ಶ್ರೀರಾಮನ ಪಾದ ಸ್ಪರ್ಶಿಸಿದ ಸ್ಥಳಗಳಲ್ಲಿ ನಿರ್ಮಾಣವಾಗಿರುವ ಮಂದಿರಗಳಲ್ಲಿ ಜನರು ಪೂಜಾ ಕೈಂಕರ್ಯಗಳಲ್ಲಿ ತೊಡಗಿದ್ದಾರೆ. ಈ ನಡುವೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಬೇಕರಿ ಸಿಬ್ಬಂದಿಯೊಬ್ಬರು ಕೇಕ್‌ನಲ್ಲಿ ಶ್ರೀರಾಮಂದಿರದ ಪ್ರತಿಕೃತಿ ರಚಿಸಿ ಗಮನ ಸೆಳೆದಿದ್ದಾರೆ.
ರಾಣೆಬೆನ್ನೂರು ನಗರದ ಪ್ರವಾಸಿಮಂದಿರದ ವೃತ್ತದಲ್ಲಿರುವ ಬೇಕರಿ ಸಿಬ್ಬಂದಿ ಮಹಾಂತೇಶ್.ಟಿ ಇದರ ನಿರ್ಮಾತೃ. ಇವರು ಈ ವಿಶಿಷ್ಟ ಕೇಕ್ ಅನ್ನು ಸುಮಾರು 5 ದಿನ ತೆಗೆದುಕೊಂಡು ತಯಾರಿಸಿದ್ದಾರೆ. ಅಂದಾಜು 20 ಕೆ.ಜಿ ಸಕ್ಕರೆಯ ಪೇಸ್ಟ್ ಅನ್ನು ಕೇಕ್‌ಗೆ ಬಳಸಲಾಗಿದೆ. ಇವರು ಕಳೆದ 15 ವರ್ಷಗಳಿಂದ ಕೇಕ್ ತಯಾರಿಕೆಯಲ್ಲಿ ತೊಡಗಿದ್ದಾರೆ. ಆದರೆ ಇಂಥ ಕೇಕ್‌ಗೆ ಸಾಕಷ್ಟು ನೈಪುಣ್ಯತೆ, ಸಹನೆ ಬೇಕು ಎನ್ನುತ್ತಾರೆ ಮಹಾಂತೇಶ್. ಇದಕ್ಕಾಗಿ ಸುಮಾರು 40 ಸಾವಿರ ರೂಪಾಯಿ ವ್ಯಯಿಸಿದ್ದಾರಂತೆ.
ಆಯೋಧ್ಯೆ ಶ್ರೀರಾಮ ಮಂದಿರ ನೋಡಲು ಜನವರಿ 22ರವರೆಗೆ ಕಷ್ಟಸಾಧ್ಯ. ಆದರೆ ಕೇಕ್‌ನಲ್ಲಿ ಅರಳಿಸಿರುವ ಈ ಕಲಾಕೃತಿ ಆಯೋಧ್ಯೆ ಮಂದಿರವನ್ನೇ ಕಣ್ಣ ಮುಂದೆ ತಂದು ನಿಲ್ಲಿಸಿದೆ ಎನ್ನುತ್ತಾರೆ ಓರ್ವ ರಾಮಭಕ್ತರು. ಈ ಕಲಾಕೃತಿ ಶ್ರೀರಾಮ ಮಂದಿರ ಉದ್ಘಾಟನೆಯವರೆಗೆ ಸಾರ್ವಜನಿಕರ ದರ್ಶನಕ್ಕೆ ಸಿಗಲಿದೆ. ರಾಮನ ಭಕ್ತರೂ ಆಗಿರುವ ಮಹಾಂತೇಶ್ ಮುಂದಿನ ದಿನಗಳಲ್ಲಿ ಆಯೋಧ್ಯೆಗೆ ತೆರಳಿ ಮಂದಿರ ಕಣ್ತುಂಬಿಕೊಳ್ಳುವುದಾಗಿಯೂ ತಿಳಿಸಿದರು.
ಸ್ಥಳೀಯರ ಮೆಚ್ಚುಗೆಯಿಂದ ಸಾಕಷ್ಟು ಪ್ರೇರಣೆ ಸಿಕ್ಕಿದೆ. ಮುಂದಿನ ದಿನಗಳಲ್ಲಿ ರಾಮಾಯಣಕ್ಕೆ ಸಂಬಂಧಿಸಿದ ಕಲಾಕೃತಿಗಳನ್ನು ಕೇಕ್‌ನಲ್ಲಿ ನಿರ್ಮಿಸಿ ಪ್ರದರ್ಶನ ಏರ್ಪಡಿಸುವುದಾಗಿ ಮಹಾಂತೇಶ್ ಹೇಳಿದರು. ರಾಮಮಂದಿರ ಪ್ರತಿಕೃತಿ ಇರುವ ಈ ಬೇಕರಿಗೆ ದಿನನಿತ್ಯ ನೂರಾರು ರಾಮ ಭಕ್ತರು ಭೇಟಿ ನೀಡುತ್ತಿದ್ದಾರೆ. ಸದ್ಯ ಕೇಕ್ ಸುಮಾರು ಒಂದು ತಿಂಗಳ ಕಾಲ ಕೆಡದಂತಿಡಬಹುದು ಎಂದು ಮಹಾಂತೇಶ್ ಹೇಳಿದ್ದಾರೆ. ರಾಮಮಂದಿರ ವೀಕ್ಷಣೆ ಜೊತೆಗೆ ಭಕ್ತರಿಗೆ ಶ್ರೀರಾಮನ ಭಕ್ತಿಗೀತೆಗಳ ಪ್ರಸಾರದ ವ್ಯವಸ್ಥೆಯನ್ನೂ ಇಲ್ಲಿ ಮಾಡಿದ್ದಾರೆ. ರಾಮಮಂದಿರ ಕೇಕ್ ಜೊತೆ ಜನರು ಸೆಲ್ಪಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದಾರೆ.
ಕಳೆದ ವರ್ಷ ಗಣೇಶ ಚತುರ್ಥಿ ವೇಳೆ ರಾಣೆಬೆನ್ನೂರು ನಗರದ ವಂದೇಮಾತರಂ ಸಂಸ್ಥೆ ರಾಮಮಂದಿರದ ಶೇ.30ರಷ್ಟು ಪ್ರಮಾಣದಲ್ಲಿ ಪ್ರತಿಕೃತಿ ರಚಿಸಿತ್ತು. ಅಲ್ಲದೆ ಅದರಲ್ಲಿ ಭರತ, ಶತ್ರುಘ್ನ ಲಕ್ಷ್ಮಣ ಹಾಗು ಹನುಮಂತನ ಮೂರ್ತಿಗಳನ್ನು ಸ್ಥಾಪಿಸಿದ್ದರು.
ಇದನ್ನೂ ಓದಿ: ಪುತ್ತಿಗೆ ಶ್ರೀಗೆ ಕೃಷ್ಣ ಪೂಜೆಯ ಅಧಿಕಾರ ಹಸ್ತಾಂತರಿಸಿದ ಅದಮಾರು ಶ್ರೀ