ರಾಣೆಬೆನ್ನೂರು: ಊರಿನ ದೇವತೆಗೆ ಬಿಟ್ಟ ಕೋಣವನ್ನು ಮಾರಾಟ ಮಾಡಿದರ ಕುರಿತು ಪ್ರಶ್ನಿಸಿದ್ದಕ್ಕೆ ದಲಿತರಿಗೆ ಬಹಿಷ್ಕಾರ ಹಾಕಿರುವ ಘಟನೆ ರಾಣೆಬೆನ್ನೂರು ತಾಲೂಕಿನ ಸೋಮಲಾಪುರ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಸೋಮಲಾಪುರ ಗ್ರಾಮದಲ್ಲಿ ಊರು ದೇವರ ಹಬ್ಬಕ್ಕಾಗಿ ಬಿಟ್ಟ ಕೋಣವನ್ನು ಗ್ರಾಮದ ಇನ್ನೊಂದು ಸಮುದಾಯ ಹೇಳದೆ ಮಾರಾಟ ಮಾಡಿದ್ದಾರೆ. ಕೋಣ ಮಾರಾಟ ಬಗ್ಗೆ ದಲಿತ ಸಮುದಾಯದ ಜನರು ಇನ್ನೊಂದು ಸಮುದಾಯದ ಹಿರಿಯರನ್ನು ಪ್ರಶ್ನಿಸಿದ್ದಾರೆ. ಈ ಸಮಯದಲ್ಲಿ ಎರಡು ಸಮುದಾಯಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಅದನ್ನು ಕೇಳಲು ನೀವು ಯಾರು? ಎಂದು ದಲಿತರಿಗೆ ಪ್ರಶ್ನಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ದಲಿತ ಸಮುದಾಯ ಊರಿನ ಯಾವ ಕಾರ್ಯಕ್ರಮಕ್ಕೂ ತೆರಳಿಲ್ಲ. ಇದರಿಂದ ಕೋಪಗೊಂಡ ಇನ್ನೊಂದು ಸಮುದಾಯದ ಜನರು ಊರಲ್ಲಿರುವ ದಲಿತರಿಗೆ ಯಾರು ಕೂಡ ಅಂಗಡಿ, ಮನೆಗಳಲ್ಲಿ ಆಹಾರ ಅಥವಾ ಪದಾರ್ಥಗಳನ್ನು ನೀಡಬಾರದು ಎಂದು ಆಜ್ಞೆ ಹೊರಡಿಸಿದ್ದಾರೆ. ಅಲ್ಲದೇ ಗ್ರಾಮದ ಹಿರಿಯರ ಆಜ್ಞೆ ಮೀರಿ ಅವರಿಗೆ ಆಹಾರ ಪದಾರ್ಥಗಳನ್ನು ನೀಡಿದರೆ ಅಂತವರಿಗೆ 50 ಸಾವಿರ ರೂ. ದಂಡ ಹಾಕಲಾಗುವುದು ಎಂದು ಸೂಚನೆ ನೀಡಿದ್ದಾರೆ ಎನ್ನಲಾಗ್ತಿದೆ.
ದಲಿತ ಸಮುದಾಯದ ಜನರು ಅಂಗಡಿಗಳಿಗೆ ತೆರಳಿದ ಸಮಯದಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಗ್ರಾಮಸ್ಥರು ತಿಳಿಸಿದ ಆಜ್ಞೆಯನ್ನು ವಿಡಿಯೋ ಮಾಡಿದ್ದಾರೆ. ಈ ಪ್ರಕರಣ ಕುರಿತು ರಾಣೆಬೆನ್ನೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ತೆರಳಿ ಅಲ್ಲಿನ ವಾಸ್ತವ ಸ್ಥಿತಿ ಕುರಿತು ಮಾಹಿತಿ ಪಡೆಯುತ್ತಿದ್ದಾರೆ.