ಹಾವೇರಿ: ಜಿಲ್ಲೆಯ ಶಿಗ್ಗಾವಿ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ ಮಂಗಳವಾರ ನಡೆಯಿತು. ಈ ಗೊತ್ತುವಳಿ ಮಂಡನೆ ಸಭೆಯಲ್ಲಿ ಪುರಸಭೆ ಅಧ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ ಅವರು ಪುರಸಭೆ ಮುಖ್ಯಾಧಿಕಾರಿಯಿಂದ ಫೈಲ್ ಕಿತ್ತುಕೊಳ್ಳಲು ಯತ್ನಿಸಿದರು.
ಒಟ್ಟು 23 ಸದಸ್ಯರ ಬಲ ಹೊಂದಿರುವ ಪುರಸಭೆಯಲ್ಲಿ ಬಿಜೆಪಿಯ 9, 6 ಕಾಂಗ್ರೆಸ್ ಮತ್ತು 8 ಜನ ಪಕ್ಷೇತರ ಸದಸ್ಯರಿದ್ದಾರೆ. ಪುರಸಭೆಯ ಬಿಜೆಪಿ ಅಧ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ ಮತ್ತು ಉಪಾಧ್ಯಕ್ಷ ಮಂಜುನಾಥ ಬ್ಯಾಹಟ್ಟಿ ವಿರುದ್ಧ 17 ಸದಸ್ಯರು ಮಂಗಳವಾರ ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡಿದ್ದಾರೆ.
ಅಧ್ಯಕ್ಷರ ವಿರುದ್ಧವೇ ಅವಿಶ್ವಾಸ ಗೊತ್ತುವಳಿ ಮಂಡನೆ ವೇಳೆ ಅಧ್ಯಕ್ಷತೆ ವಹಿಸಲು ಬರುವುದಿಲ್ಲ ಅಂತಾ ಪುರಸಭೆ ಮುಖ್ಯಾಧಿಕಾರಿ ಮಲ್ಲಯ್ಯ ಹಿರೇಮಠ ಹೇಳಿದರೂ ಶ್ರೀಕಾಂತ ಬುಳ್ಳಕ್ಕನವರ ಕುರ್ಚಿ ಬಿಟ್ಟುಕೊಡಲಿಲ್ಲ. ಮುಖ್ಯಾಧಿಕಾರಿ ತಿಳಿಸಿದರೂ ಕೂಡ ಶ್ರೀಕಾಂತ್ ಅಧ್ಯಕ್ಷತೆ ವಹಿಸಲು ಮುಂದಾಗಿದ್ದರು.
ಮುಖ್ಯಾಧಿಕಾರಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ ಪ್ರಕ್ರಿಯೆ ಆರಂಭಿಸುತ್ತಿದ್ದಂತೆ ಅಧ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ ಅವರು ಮುಖ್ಯಾಧಿಕಾರಿ ಕೈಯಲ್ಲಿದ್ದ ಫೈಲ್ ಕಿತ್ತುಕೊಳ್ಳಲು ಯತ್ನಿಸಿದರು. ಮುಖ್ಯಾಧಿಕಾರಿಯು ಪೊಲೀಸರನ್ನ ಕರೆಯುತ್ತಿದ್ದಂತೆ ಸುಮ್ಮನಾದರು. ಫೈಲ್ ಕೊಡದೆ ಕೋಣೆಯೊಳಗೆ ಹೋದ ಮುಖ್ಯಾಧಿಕಾರಿ ಬಾಗಿಲು ಹಾಕಿಕೊಂಡು ನಂತರ ಅವಿಶ್ವಾಸ ಗೊತ್ತುವಳಿಗೆ ಅವಕಾಶ ನೀಡಿದರು. ಕೊನೆಗೂ 17 ಸದಸ್ಯರು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತವರು ಕ್ಷೇತ್ರದಲ್ಲೇ ಪುರಸಭೆ ಅಧ್ಯಕ್ಷ ಕುರ್ಚಿಗಾಗಿ ತಳ್ಳಾಟ, ನೂಕಾಟದ ಹೈಡ್ರಾಮಾ ನಡೆದಿದೆ.
ಇದನ್ನೂ ಓದಿ: 'ಮಹಿಳೆ ಮನೆಯೇ ಪೆಟ್ರೋಲ್ ಅಡ್ಡಾ': 110 ರೂ. ಬದಲು 77ಕ್ಕೆ ಮಾರಾಟ.. ಏನಿದರ ಕರಾಮತ್ತು?