ಹಾವೇರಿ: ಪರಿಸರ ಸಂರಕ್ಷಣೆಗಾಗಿ ಉತ್ತರ ಪ್ರದೇಶ ಇಟಾವಾ ನಗರದ ರಾಬಿನಸಿಂಗ್ ಸೈಕಲ್ ಮೇಲೆ ದೇಶ ಪರ್ಯಟನೆ ಕೈಗೊಂಡಿದ್ದಾರೆ. 2022 ಆಕ್ಟೋಬರ್ 6 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾಗಿರುವ ಇವರ ಸೈಕಲ್ ಯಾತ್ರೆ ಈಗಾಗಲೇ 26 ಸಾವಿರ ಕಿಲೋ ಮೀಟರ್ ಪ್ರವಾಸ ಪೂರ್ಣಗೊಂಡಿದೆ. ಸೈಕಲ್ ಜಾಥಾ ಆರಂಭಿಸಿ ಇಂದಿಗೆ 440 ದಿನವಾಗಿದ್ದು, ಈ ದಿನ ಹಾವೇರಿಗೆ ಆಗಮಿಸಿದ್ದಕ್ಕೆ ರಾಬಿನಸಿಂಗ್ ಸಂತಸ ವ್ಯಕ್ತಪಡಿಸಿದರು.
ತಮಿಳನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ಒಡಿಶಾ, ಜಾರ್ಖಂಡ್, ಪಶ್ಚಿಮ ಬಂಗಾಳ, ಅಸ್ಸೋಂ, ಮೇಘಾಲಯ, ತ್ರಿಪುರಾ, ಮಿಜೋರಾಂ, ಬಿಹಾರ, ಉತ್ತರ ಪ್ರದೇಶ, ಉತ್ತರಾಖಂಡ, ಹರಿಯಾಣ, ಪಂಜಾಬ್, ದೆಹಲಿ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಲ್ಲಿ ಸಂಚರಿಸಿದ್ದಾರೆ. ಕೆಲ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಹ ರಾಬಿನಸಿಂಗ್ ಸೈಕಲ್ ಯಾತ್ರೆ ಕೈಗೊಂಡಿದ್ದಾರೆ. ಆರಂಭದಲ್ಲಿ ದಿನಕ್ಕೆ 70 ರಿಂದ 80 ಕೀಮೀಟರ್ ಸೈಕಲ್ ತುಳಿಯುತ್ತಿದ್ದ ರಾಬಿನಸಿಂಗ್ ಈಗ ದಿನಕ್ಕೆ 100 ರಿಂದ 110 ಕೀಮೀಟರ್ ಸೈಕಲ್ ತುಳಿಯುತ್ತಿದ್ದಾರೆ.
ಕನ್ಯಾಕುಮಾರಿಯಿಂದ ಆರಂಭವಾಗಿರುವ ಇವರ ಸೈಕಲ ಮೇಲಿನ ದೇಶ ಪರ್ಯಟನೆ ಮಾರ್ಚ್ 11, 2024 ರಂದು ಮಧ್ಯಪ್ರದೇಶದ ಭೂಪಾಲ್‌ನಲ್ಲಿ ಸಮಾರೋಪಗೊಳ್ಳಲಿದೆ. ರಾಬಿನ್‌ಸಿಂಗ್ ಉತ್ತರ ಪ್ರದೇಶದ ಇಟಾವಾ ಗ್ರಾಮದವರಾಗಿದ್ದು, ಸ್ನಾತಕೋತ್ತರ ಪದವಿಧರನಾಗಿದ್ದಾರೆ. ಗ್ರಾಮದಲ್ಲಿ ಸಾಮಾನ್ಯ ಕೃಷಿಕನಾಗಿರುವ ಅವರು ಪರಿಸರ ಜಾಗೃತಿ ಮೂಡಿಸುತ್ತಿದ್ದಾರೆ. ತಾವು ಸಂಚರಿಸುವ ಮಾರ್ಗಮಧ್ಯದಲ್ಲಿ ಶಾಲಾ ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಪರಿಸರ ಕುರಿತಂತೆ ಜಾಗೃತಿ ಮೂಡಿಸುತ್ತಿದ್ದಾರೆ. ಪ್ರಮುಖವಾಗಿ ನಿತ್ಯ ನಾವು ಬಳಸುವ ಆಮ್ಲಜನಕ, ನೀರು ಮತ್ತು ಆಹಾರದ ಬಗ್ಗೆ ರಾಬಿನ್ ಜಾಗೃತಿ ಮೂಡಿಸುತ್ತಿದ್ದಾರೆ.
ಹಾವೇರಿ ನಗರದ ಜೆ.ಹೆಚ್.ಕಾಲೇಜ್‌ಗೆ ತೆರಳಿದ ಅವರು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು. ಪರಿಸರ, ಕಾಡು, ನೀರು, ವಾಯು ಮಾಲಿನ್ಯದ ಕುರಿತು ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ಪರಿಸರ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಬಿನಸಿಂಗ್, ಪರಿಸರ ಸಂರಕ್ಷಣೆ ಒಬ್ಬರಿಂದ ಸಾಧ್ಯವಿಲ್ಲ, ಪ್ರತಿಯೊಬ್ಬರೂ ಕೈಜೋಡಿಸಿದಾಗ ಇದು ಸಾಧ್ಯ. ಸ್ವಚ್ಛ ಪರಿಸರ, ಶುದ್ಧ ಗಾಳಿ ಹಾಗೂ ಶುದ್ಧ ಆಹಾರದ ಜಾಗೃತಿ ಮೂಡಿಸುವ ಉದ್ದೇಶದಿಂದ ದೇಶದಾದ್ಯಂತ ಸೈಕಲ ಯಾತ್ರೆ ಕೈಗೊಂಡಿರುವುದಾಗಿ ರಾಬಿನ್ ತಿಳಿಸಿದರು. ನವ ದೆಹಲಿಯಲ್ಲಿ ಉಂಟಾಗುವ ವಾಯು ಮಾಲಿನ್ಯದಿಂದ ಜನರಿಗೆ ಉಸಿರಾಟಕ್ಕೆ ತೊಂದರೆಯಾಗುತ್ತಿದೆ. ರಾಜ್ಯ, ದೇಶಗಳಿಗೆ ಗಡಿ ಇದೆ, ಆದರೆ, ಪರಿಸರಕ್ಕೆ ಯಾವುದೇ ಗಡಿ ಇರುವುದಿಲ್ಲ. ಪ್ರಪಂಚದ ಯಾವುದೇ ಭಾಗದಲ್ಲಿ ಪರಿಸರಕ್ಕೆ ಹಾನಿಯಾದರೂ ಸಹ ಹಲವು
ಪ್ರದೇಶಗಳ ಮೇಲೆ ದುಷ್ಪರಿಣಾಮ ಬೀರುತ್ತದೆ.
ವಾಯು ಮಾಲಿನ್ಯ, ಜಲ ಮಾಲಿನ್ಯದಿಂದ ಪರಿಸರ ಹಾಳಾಗುತ್ತಿದೆ. ನಾವು ಸೇವಿಸುವ ಆಹಾರ ಶುದ್ಧವಾಗಿಲ್ಲ ಎಂದು
ಕಳವಳ ವ್ಯಕ್ತಪಡಿಸಿದರು. ಗಾಳಿ, ನೀರು ಹಾಗೂ ಆಹಾರ ಶುದ್ಧವಾಗಿರುವಂತೆ ನೋಡಿಕೊಳ್ಳಬೇಕು. ದೇಶಿ ಆಹಾರ ಪದ್ಧತಿ ಅನುಸರಿಸಬೇಕು. ನೈಸರ್ಗಿಕವಾಗಿ ದೊರೆಯುವ ನೀರನ್ನು ಕುಡಿಯಬೇಕು. ನಾನು ನೈಸರ್ಗಿಕವಾಗಿ ದೊರೆಯುವ ನೀರು ಕುಡಿಯುತ್ತೇನೆ ಸದೃಢವಾಗಿದ್ದೇನೆ. ನಮ್ಮಲ್ಲಿರುವ ನೈಸರ್ಗಿಕ ಸಂಪತ್ತು, ಅರಣ್ಯವನ್ನು ಕಾಪಾಡಿಕೊಳ್ಳಬೇಕು. ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಧ್ವನಿ ಎತ್ತಬೇಕು. ಪರಿಸರ ಸಂರಕ್ಷಣೆ ಸಂದೇಶ ನೀಡುತ್ತಾ ದೇಶ ಸಂಚಾರ ಮಾಡುವದರಲ್ಲಿ ಖುಷಿ ಇದೆ ಎಂದು ತಿಳಿಸಿದರು.
ಪರಿಸರ ಸಂರಕ್ಷಣೆ ನೆಪದಲ್ಲಿ ಸೈಕಲ್ ಮೇಲೆ ದೇಶವನ್ನೇ ಸುತ್ತಿದ ಅನುಭವ ನನಗಾಗಿದೆ. ಸೈಕಲ್ ಯಾತ್ರೆ ಮುಗಿದ ಮೇಲೆ ನನ್ನ ಸ್ವಂತ ಗ್ರಾಮಕ್ಕೆ ತೆರಳಿ ಕೃಷಿಯಲ್ಲಿ ನಿರತನಾಗುತ್ತೇನೆ. ದೇಶದಲ್ಲಿ ಸುತ್ತಿದ ಅನುಭವ ಜನರ ಸಂದೇಶಗಳನ್ನು ಕೃಷಿಯಲ್ಲಿ ಅಳವಡಿಸಿಕೊಂಡು ನೆಮ್ಮದಿಯ ಜೀವನ ಕಳೆಯುವ ಇಂಗಿತವನ್ನ ರಾಬಿನಸಿಂಗ್ ವ್ಯಕ್ತಪಡಿಸಿದ್ದಾರೆ. ಅವರ ಮುಂದಿನ ಪಯಣ ಸುಖಕರವಾಗಿರಲಿ ಎನ್ನುವುದು ನಮ್ಮ ಹಾರೈಕೆ.
ಇದನ್ನೂ ಓದಿ: ಕಾಲ್ನಡಿಗೆಯಲ್ಲಿಯೇ ದೇಶ ಪರ್ಯಟನೆ ಹೊರಟ ಎಂಜಿನಿಯರಿಂಗ್ ಪದವೀಧರ: ಪುಸ್ತಕ ರಚಿಸುವ ಇಂಗಿತ!