ಹಾಸನ/ಬೇಲೂರು: ದೇವರು ಕೊಟ್ಟರು ಪೂಜಾರಿ ಕೊಡಲ್ಲ ಎನ್ನುವ ಹಾಗೆ ಸರ್ಕಾರ ಶುಚಿ ರುಚಿಯಾದ ಬಿಸಿಯೂಟದ ವ್ಯವಸ್ಥೆ ಕಲ್ಪಿಸಿದ್ರು ಅಧಿಕಾರಿಗಳ ನಿರ್ಲಕ್ಷ್ಯ ಮಾತ್ರ ಇನ್ನು ನಿಂತಿಲ್ಲ ಎಂಬುದಕ್ಕೆ ಬೇಲೂರು ಪಟ್ಟಣದ ಬಿಸಿಎಂ ಹಾಸ್ಟೆಲ್ ಉದಾಹರಣೆಯಾಗಿದೆ.
ಹೌದು, ರಾಜ್ಯದ ಬಡ ಮಕ್ಕಳಿಗಾಗಿ ಸರ್ಕಾರ ವಸತಿ ನಿಲಯ ತೆರೆದಿದ್ದು, ಅಲ್ಲಿ ಶುಚಿ-ರುಚಿಯಾದ ಊಟ-ತಿಂಡಿ ನೀಡಲೆಂದು ಸರ್ಕಾರ ತನ್ನ ಬೊಕ್ಕಸದಿಂದ ಹಣವನ್ನ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸುರಿಯುತ್ತಿದೆ. ಆದರೂ ಅದನ್ನ ಸರಿಯಾದ ರೀತಿಯಲ್ಲಿ ಉಪಯೋಗಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಹಾಸ್ಟೆಲ್ ವಾರ್ಡನ್ಗೆ ಕರವೇ ಸಂಘಟನೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡು ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಿದೆ.
ಹಾಸ್ಟೆಲ್ ವಿದ್ಯಾರ್ಥಿಗಳಿಗೆ ತಿಂಡಿ ಮಾಡುವ ಸಲುವಾಗಿ ಸರ್ಕಾರ ಗೋಧಿ ಕೊಟ್ಟರೆ ಅದನ್ನ ಅಡುಗೆ ಮನೆಯಲ್ಲಿ ಇಡದೇ ಆ ಚೀಲಗಳನ್ನು ಶೌಚಾಲಯದಲ್ಲಿಡುವ ಮೂಲಕ ಎಡವಟ್ಟು ಮಾಡಿದ್ದಾರೆ. ಹುಳು ಬಿದ್ದಿರುವ ಗೋಧಿಯನ್ನೇ ಹಿಟ್ಟು ಮಾಡಿ ವಿವಿಧ ರೀತಿಯ ಆಹಾರ ಪದಾರ್ಥಗಳನ್ನ ವಿದ್ಯಾರ್ಥಿಗಳಿಗೆ ನೀಡುತ್ತಿದ್ದಾಋಎ ಎಂದು ಬೇಲೂರು ಕರವೇ ಆರೋಪಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾರ್ಥಿಗಳು, ವಸತಿ ನಿಲಯದಲ್ಲಿರುವ ಹಲವು ಸಮಸ್ಯೆಗಳನ್ನ ಒಂದೊಂದಾಗಿ ಕರವೇ ಕಾರ್ಯಕರ್ತರ ಸಮ್ಮುಖದಲ್ಲಿ ಬಿಚ್ಚಿಟ್ಟರು. ಪ್ರತಿನಿತ್ಯ ನಮಗೆ ಹುಳು ಮಿಶ್ರಿತ ಚಪಾತಿ ಮತ್ತು ಅನ್ನ ನೀಡಲಾಗುತ್ತಿದೆ. ಅಲ್ಲದೆ ಗೋಧಿಯನ್ನು ರಸ್ತೆ ಬದಿಯಲ್ಲಿ ಒಣಗಿ ಹಾಕುವುದರಿಂದ ಮಣ್ಣು-ಧೂಳು ಮಿಶ್ರಿತವಾಗಿ ಆಹಾರದಲ್ಲಿ ಕಲ್ಲು ಸಿಗುತ್ತವೆ. ಇನ್ನು ಹಲವು ತಿಂಗಳಿಂದ ಸೋಲಾರ್ ಕೆಟ್ಟು ಹೋಗಿದ್ದು, ಪ್ರತಿನಿತ್ಯ ತಣ್ಣೀರಿನಲ್ಲಿಯೇ ಸ್ನಾನ ಮಾಡುವಂತಾಗಿದೆ. ವಾರದ ಆಹಾರ ಪಟ್ಟಿಯನ್ನ ಬಿಟ್ಟು ತಮ್ಮ ಮನಸ್ಸಿಗೆ ತೋಚಿದ್ದನ್ನು ಅಡುಗೆ ಮಾಡ್ತಾರೆ. ತರಕಾರಿ ಇಲ್ಲದ ಸಾಂಬಾರು, ಎಣ್ಣೆಯಿಲ್ಲದ ಉಪ್ಪಿಟ್ಟು ಕೊಡ್ತಾರೆ. ಗುಣಮಟ್ಟದ ಆಹಾರ ಸೇವನೆ ಮಾಡಿ ಎಷ್ಟೋ ತಿಂಗಳಾಗಿದೆ ಎಂದು ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಬಡತನದ ಮಧ್ಯೆ ವಿದ್ಯೆ ಕಲಿಯಲು ಬಂದ ಬಡ ಮತ್ತು ಕೂಲಿ ಕಾರ್ಮಿಕರ ಮಕ್ಕಳಿಗೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಳಪೆ ಮತ್ತು ಹುಳು ಮಿಶ್ರಿತ ಆಹಾರವನ್ನ ಉಣಬಡಿಸಲಾಗುತ್ತಿದೆ. ವಿದಿಯಿಲ್ಲದೇ ಇಷ್ಟು ದಿನಗಳ ಕಾಲ ವಿದ್ಯಾರ್ಥಿಗಳು ಸೇವಿಸಿದ್ದಾರೆ. ಇಂತಹ ಅಧಿಕಾರಿ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಕರವೇ ಆಗ್ರಹಿಸಿದೆ.