ಸಕಲೇಶಪುರ(ಹಾಸನ): ಪರಿಸರ ಉಳಿಸಿ, ಕಾಡು ಬೆಳೆಸಿ ಎಂಬ ವಾಕ್ಯವನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷೆ ಶ್ವೇತಾ ಪ್ರಸನ್ನ ಹೇಳಿದರು.
ತಾಲೂಕಿನ ಬ್ಯಾಕರವಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲಾ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಪ್ರತಿವರ್ಷ ತಾಲೂಕಿನಲ್ಲಿ ಸುಮಾರು ಒಂದು ಲಕ್ಷ ಸಸಿ ವಿತರಿಸಿಕೊಂಡು ಬರಲಾಗುತ್ತಿದೆ. ಕುವೆಂಪು ಅವರು ಹಸಿರಿನ ಗಿರಿಗಳ ಸಾಲೆ ನಿನ್ನಯ ಕೊರಳಿನ ಮಾಲೆ ಎಂದು ಪ್ರಕೃತಿಯನ್ನು ವರ್ಣಿಸುತ್ತಾರೆ. ಈ ಒಂದು ಸಾಲು ಪರಿಸರ ಸಂರಕ್ಷಿಸಲು ಪ್ರತಿಯೊಬ್ಬರಿಗೂ ಪ್ರೇರೇಪಿಸುತ್ತದೆ ಎಂದರು.
ತಾ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರೀಶ್ ಮಾತನಾಡಿ, ತಾಲೂಕಿನಲ್ಲಿ ಈ ಬಾರಿ 1,08,000 ಸಸಿಗಳನ್ನ ನೆಡಲು ಉದ್ದೇಶಿಸಲಾಗಿದೆ. 6x9 ಅಳತೆಯ ಒಟ್ಟು 40,000 ಸಸಿಗಳು, 8X12 ಅಳತೆಯ 10,000 ಸಸಿಗಳನ್ನ ರೈತರಿಗೆ ನೀಡಲಾಗುವುದು. ಚಿಕ್ಕ ಸಸಿಗಳಿಗೆ 1 ರೂ. ಹಾಗೂ ದೊಡ್ಡ ಸಸಿಗಳಿಗೆ 3 ರೂ. ದರ ವಿಧಿಸಲಾಗುತ್ತದೆ. ಸುಮಾರು 58,000 ಸಸಿಗಳನ್ನ ಸಾರ್ವಜನಿಕವಾಗಿ ನೆಡಲಾಗುತ್ತದೆ. ರೈತರು ನೆಟ್ಟ ಸಸಿಗಳಿಗೆ ಉದ್ಯೋಗ ಖಾತರಿ ಯೋಜನೆಯಡಿ ಹಣ ಸಹ ನೀಡಲಾಗುತ್ತದೆ. ಇದನ್ನು ರೈತರು ಸದುಪಯೋಗ ಮಾಡಿಕೊಳ್ಳಬೇಕು ಎಂದರು.