ಹಾಸನ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಡು ಹಂದಿಗಳು ದಾಳಿ ನಡೆಸಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಂಜೇಗೌಡ (50) ಹಾಗೂ ಸ್ವಾಮಿಗೌಡ (59) ಕಾಡು ಹಂದಿಗಳ ದಾಳಿಗೊಳಗಾದ ವ್ಯಕ್ತಿಗಳಾಗಿದ್ದು, ಕಟ್ಟಾಯ ಹೋಬಳಿಯ ಬ್ಯಾಡರಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಇವತ್ತು ಇಬ್ಬರೂ ತೋಟದ ಕೆಲಸಕ್ಕೆಂದು ಮನೆಯಿಂದ ಹೊರಟು ತಮ್ಮ ಜಮೀನಿನಲ್ಲಿ ಬೆಳೆದಿದ್ದ ಮೆಣಸಿನಕಾಯಿ ಫಸಲನ್ನು ಬಿಡಿಸುತ್ತಿದ್ದ ವೇಳೆ ಹಿಂದಿನಿಂದ ದಾಳಿ ನಡೆಸಿವೆ. ಪರಿಣಾಣ ಇಬ್ಬರೂ ಗಾಯಗೊಂಡಿದ್ದಾರೆ.
ಗಾಯಾಳುಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ವಾಮಿಗೌಡರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಆಗ ಚಿರತೆ ಕಾಟ ಈಗ ಹಂದಿಗಳ ಉಪಟಳ
ಕಳೆದ ಎರಡು-ಮೂರು ಮೂರು ವರ್ಷಗಳ ಹಿಂದೆ ಈ ಭಾಗದಲ್ಲಿ ಸಾಕಷ್ಟು ಚಿರತೆಗಳಿದ್ದವು. ಗ್ರಾಮದ ಸಮೀಪದಲ್ಲಿದ್ದ ಎ.ಗುಡುಗನಹಳ್ಳಿ ಗ್ರಾಮದಲ್ಲಿ ಮೂರು ವರ್ಷಗಳ ಹಿಂದೆ ಶಾಲೆಯಿಂದ ಮನೆಗೆ ಬಂದು ಆಟವಾಡುತ್ತಿದ್ದ ಬಾಲಕನನ್ನು ಚಿರತೆಯೊಂದು ಹೊತ್ತೊಯ್ದು ಕೊಂದು ತಿಂದು ಮುಗಿಸಿತ್ತು. ಇದರ ಬೆನ್ನಲ್ಲಿಯೇ ಕಳೆದ ವರ್ಷ ಕೂಡ ಸುಮಾರು ಎಂಟು ಚಿರತೆಗಳನ್ನು ಅರಣ್ಯಾಧಿಕಾರಿಗಳು ಬೋನಿಗೆ ಬೀಳಿಸಿ ಬೇರೆಡೆಗೆ ಸ್ಥಳಾಂತರ ಮಾಡಿದ್ದರು. ಸದ್ಯ ಚಿರತೆ ಕಾಟ ತಪ್ಪಿತಲ್ಲ ಎನ್ನುವಷ್ಟರಲ್ಲಿ ಮತ್ತೆ ಈಗ ಕಾಡಂದಿಗಳ ಹಾವಳಿ ಹೆಚ್ಚಾಗಿದೆ.
ಕಾಡು ಪ್ರಾಣಿಗಳು ನಾಡಿಗೆ ಬರಲು ಕಾರಣವೇನು?
ಜಿಲ್ಲೆಯಲ್ಲಿ ಬರಗಾಲ ಆವರಿಸಿದ್ದರಿಂದ ಪ್ರಾಣಿಗಳಿಗೂ ಆಹಾರ ಮತ್ತು ನೀರಿನ ಕೊರತೆ ಉಂಟಾಗಿದೆ. ಇದರಿಂದ ಕಾಡಿನಲ್ಲಿರುವ ಕೆಲವು ಕಾಡು ಪ್ರಾಣಿಗಳು ನಾಡಿನತ್ತ ಆಗಮಿಸಿ ರೈತರು ಬೆಳೆದ ಬೆಳೆಗಳ ಹಾಳು ಮಾಡುವುದರ ಜೊತೆಗೆ ತಿಂದು ಮುಗಿಸುತ್ತವೆ. ಇದರ ಜೊತೆಗೆ ಕಟ್ಟಾಯ, ಗೊರೂರು ಮತ್ತು ಹಂಗ್ರಳ್ಳಿ ಭಾಗದಲ್ಲಿ ಸಾಕಷ್ಟು ಕಲ್ಲುಕೋರೆ ಇರುವುದರಿಂದ ಪ್ರತಿನಿತ್ಯ ಸಿಡಿಮದ್ದು ಸಿಡಿಸಿ ಕಲ್ಲನ್ನು ಒಡೆಯುವ ಶಬ್ದಕ್ಕೆ ಕಾಡಿನಲ್ಲಿದ್ದ ಪ್ರಾಣಿಗಳು ಹೆದರಿ ಕಾಡನ್ನ ಬಿಟ್ಟು ಹೊರಬರುತ್ತಿವೆ.
ಗ್ರಾಮಸ್ಥರ ಒತ್ತಾಯವೇನು?
ಅರಣ್ಯ ಅಧಿಕಾರಿಗಳು ಕಾಡು ಪ್ರಾಣಿಗಳ ಹಾವಳಿಯನ್ನು ತಪ್ಪಿಸಿ ಗ್ರಾಮೀಣ ಭಾಗದ ಮತ್ತು ಕಾಡಂಚಿನ ಬಳಿ ಇರುವ ಗ್ರಾಮಗಳ ರೈತಾಪಿ ವರ್ಗವನ್ನು ನೆಮ್ಮದಿಯಿಂದ ಜೀವನ ನಡೆಸಲು ಅನುವು ಮಾಡಿಕೊಡಬೇಕೆಂಬುದು ಈ ಭಾಗದ ಜನರು ಸರ್ಕಾರವನ್ನು ಆಗ್ರಹಿಸಿದ್ದಾರೆ.