ಹಾಸನ: ''ಚುನಾವಣೆಗೂ ಮುನ್ನ ನಾವು ಘೋಷಣೆ ಮಾಡಿರುವ ಐದು ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ 60 ಸಾವಿರ ಕೋಟಿ ಆರ್ಥಿಕ ಹೊರೆಯ ಭಾರವಾದ್ರೂ ಜಾರಿ ಮಾಡಿಯೇ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರದಲ್ಲಿ ಮಂಗಳವಾರ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿಯ ಸರ್ಕಾರದ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಆಗಮಿಸಿದ್ದ ವೇಳೆ ಬೂವನಹಳ್ಳಿ ಹೆಲಿಪ್ಯಾಡ್‌ನಲ್ಲಿ ಅವರು ಮಾತನಾಡಿದರು.
ಅನ್ನಭಾಗ್ಯ ಯೋಜನೆ ಸೇರಿದಂತೆ ಗ್ಯಾರಂಟಿ ಯೋಜನೆಗಳು ಸಕಾಲದಲ್ಲಿ ಅನುಷ್ಠಾನ ಆಗದೇ ಇದ್ದರೆ ಸದನದ ಒಳಗೆ ಹಾಗೂ ಹೊರಗೆ ಹೋರಾಟ ಮಾಡುತ್ತೇವೆ ಎಂಬ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಅವರು, ''ಅಕ್ಕಿ ವಿಚಾರದಲ್ಲಿ ರಾಜಕೀಯ ಗಿಮಿಕ್ ಮಾಡಬಾರದು. ಬೀದಿಗಿಳಿದು ಹೋರಾಟ ಮಾಡುವ ಬದಲು ಕೇಂದ್ರ ಸರ್ಕಾರಕ್ಕೆ ಹೇಳಿ ಅಕ್ಕಿ ಕೊಡಿಸಲಿ'' ಎಂದು ಬಿಜೆಪಿ ನಾಯಕರ ನಡೆ ವಿರುದ್ಧ ಕಿಡಿಕಾರಿದರು.
''ಬಿಜೆಪಿಯವರು ಹೇಳಿದ್ದನ್ನೆಲ್ಲ ಮಾಡಿದ್ದಾರಾ, ನಮ್ಮ ವಿರುದ್ಧ ಪ್ರತಿಭಟನೆ ಮಾಡಲು ಅವರಿಗೆ ಯಾವ ನೈತಿಕತೆ ಇದೆ. ನಾವು ಪ್ರಾಮಾಣಿಕ ಪ್ರಯತ್ನ ಮಾಡ್ತಿದ್ದೇವೆ. ಅವರ ಪ್ರಣಾಳಿಕೆಯಲ್ಲಿ ಹೇಳಿದ್ದನ್ನು ಒಂದನಾದ್ರೂ ಈಡೇರಿಸಿದ್ದಾರಾ? 2018ರಲ್ಲಿ ಅವರ ಪ್ರಣಾಳಿಕೆಯಲ್ಲಿ 600 ಭರವಸೆಗಳನ್ನು ಕೊಟ್ಟಿದ್ದರು. ಅದರಲ್ಲಿ ಎಷ್ಟು ಜಾರಿಗೆ ತಂದಿದ್ದಾರೆ. ಯಡಿಯೂರಪ್ಪ ನಂತರ ಬೊಮ್ಮಾಯಿ ಅವಧಿಯಲ್ಲಿ ಎಷ್ಟು ಇಂಪ್ಲಿಮೆಂಟ್ ಮಾಡಿದ್ದಾರೆ ಹೇಳಲಿ'' ಎಂದು ಸವಾಲು ಹಾಕಿದರು. ''ಹಿಂದಿನ ಬಿಜೆಪಿ ಸರ್ಕಾರದಲ್ಲಿ ನಡೆದಂತಹ ಎಲ್ಲಾ ವ್ಯವಹಾರಗಳನ್ನು ತನಿಖೆ ಮಾಡುತ್ತೇವೆ'' ಎಂದರು.
ರಾಜ್ಯಕ್ಕೆ ಬೇಕು 2 ಲಕ್ಷದ 29 ಸಾವಿರ ಟನ್ ಅಕ್ಕಿ: ''ಪ್ರಾಮಾಣಿಕವಾಗಿ ಅಕ್ಕಿ ಖರೀದಿಗೆ ನಾವು ಪ್ರಯತ್ನ ಮಾಡುತ್ತಿದ್ದೇವೆ. ಹೇಗಾದರೂ ಸರಿ ಅಕ್ಕಿಯನ್ನು ಖರೀದಿ ಮಾಡುತ್ತೇವೆ. ತಿಂಗಳಿಗೆ ನಮಗೆ 2 ಲಕ್ಷದ 29 ಸಾವಿರ ಟನ್ ಅಕ್ಕಿ ಬೇಕಿದೆ. ಅದನ್ನು ಹೊಂದಿಸಲು ಎಲ್ಲಾ ಪ್ರಯತ್ನ ಮಾಡುತ್ತಿದ್ದೇವೆ. ನುಡಿದಂತೆ ನಡೆಯುತ್ತೇವೆ. ಬಡವರಿಗೆ ಅಕ್ಕಿ ಕೊಡಬೇಕೆನ್ನುವುದು ನಮ್ಮ ಬದ್ಧತೆ. ಬಿಜೆಪಿಯವರಿಗೆ ಬಡವರ ಬಗ್ಗೆ ಕಾಳಜಿ ಇದ್ದರೆ, ಕೇಂದ್ರ ಸರ್ಕಾರದಿಂದ ಅಕ್ಕಿ ಕೊಡಿಸಲಿ'' ಎಂದು ಆಗ್ರಹಿಸಿದರು.
''ಕೇಂದ್ರ ಸರ್ಕಾರದವರು ಈಗ ರಾಜಕೀಯ ಮಾಡ್ತಿದ್ದಾರಲ್ಲ. ದ್ವೇಷದ ರಾಜಕಾರಣ ಮಾಡ್ತಿದ್ದಾರಲ್ಲ. ಅಕ್ಕಿ ನೀಡಲಿ, ಆರಂಭದಲ್ಲಿ ಅಕ್ಕಿ ಕೊಡುತ್ತೇವೆ ಎಂದು ಪತ್ರ ಬರೆದು ನಂತರ ಹಿಂದೇಟು ಹಾಕಿದರು. ಇದು ರಾಜಕೀಯ ಅಲ್ಲದೇ ಮತ್ತೇನು? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರ್. ಅಶೋಕ್ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಗರಂ: ಕಾಂಗ್ರೆಸ್‌ನವರು ಕೇಂದ್ರ ಸರ್ಕಾರವನ್ನು ಕೇಳಿ 10 ಕೆಜಿ ಅಕ್ಕಿ ಕೊಡ್ತೀವಿ ಅಂತ ಪ್ರಣಾಳಿಕೆಯಲ್ಲಿ ಅನೌನ್ಸ್ ಮಾಡಿದ್ರಾ ಎಂಬ ಮಾಜಿ ಸಚಿವ ಆರ್.ಅಶೋಕ್ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಗರಂ ಆದರು, ''ಅಶೋಕ್ ಅಥವಾ ಯಡಿಯೂರಪ್ಪ, ಬೊಮ್ಮಾಯಿ ಕೇಳಿ ಅನೌನ್ಸ್ ಮಾಡಬೇಕಿತ್ತಾ ಎಂದು ಟಾಂಗ್ ನೀಡಿದರು. ನಾವು ಅನೌನ್ಸ್ ಮಾಡಿದ್ದೀವಿ. ಅದನ್ನು ಸಾಕಾರ ಮಾಡಲು ಯತ್ನಿಸುತ್ತಿದ್ದೇವೆ. ನಾಳೆ ಸಚಿವ ಸಂಪುಟ ಸಭೆ ನಡೆಯಲಿದೆ. ಅಕ್ಕಿಯನ್ನು ಹೇಗೆ ಹೊಂದಿಸಬೇಕು. ಯಾವಾಗಿನಿಂದ ಅನ್ನಭಾಗ್ಯ ಯೋಜನೆ ಜಾರಿ ಮಾಡಬೇಕು ಎಂಬುದರ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ'' ಎಂದು ಹೇಳಿದರು.
''ಅದೇ ರೀತಿ ಶಕ್ತಿ ಯೋಜನೆ ಜಾರಿಯಾಗಿದೆ. ಜು.1ರಿಂದ ಗೃಹಜ್ಯೋತಿ ಯೋಜನೆಗೆ ಚಾಲನೆ ಸಿಗಲಿದೆ. ಹಾಗೆಯೇ ಗೃಹಲಕ್ಷ್ಮಿ, ಯುವನಿಧಿ ಗ್ಯಾರಂಟಿಗಳನ್ನೂ ಕಾರ್ಯಗತ ಮಾಡಲಾಗುವುದು'' ಎಂದು ಸಿಎಂ ಹೇಳಿದ್ರು.
ಇದನ್ನೂ ಓದಿ: ಬಿಜೆಪಿ ಆಡಳಿತದ ಎಲ್ಲ ಹಗರಣಗಳನ್ನು ಎಸ್ಐಟಿ ತನಿಖೆಗೆ ಒಳಪಡಿಸಲು ಚರ್ಚೆ: ಸಚಿವ ರಾಮಲಿಂಗಾ ರೆಡ್ಡಿ