ಹಾಸನ: ರಾಮಮಂದಿರಕ್ಕೆ ಶಂಕುಸ್ಥಾಪನೆ ನೆರವೇರಿಸುವ ದಿನಾಂಕವನ್ನು ಅಯೋಧ್ಯೆಯಲ್ಲಿ ನಡೆಯುವ ಮುಂದಿನ ಸಭೆಯಲ್ಲಿ ನಿಗದಿ ಮಾಡಲಾಗುವುದು ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ನಗರದಲ್ಲಿ ರಾಘವೇಂದ್ರ ಮಠಕ್ಕೆ ಭೇಟಿ ನೀಡಿದ ಅವರು ಮಾಧ್ಯಮದವರ ಜೊತೆ ಮಾತನಾಡಿ, ನವದೆಹಲಿಯಲ್ಲಿ ಬುಧವಾರ ನಡೆದ ರಾಮಮಂದಿರ ಟ್ರಸ್ಟ್‌ನ ಪ್ರಥಮ ಸಭೆಯಲ್ಲಿ ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ಮಂದಿರ ನಿರ್ಮಾಣ ಕಾರ್ಯಕ್ಕಾಗಿ ದೇಣಿಗೆ ಸಂಗ್ರಹಿಸಲು ಅಯೋಧ್ಯೆಯ ಎಸ್‌ಬಿಐ ಶಾಖೆಯಲ್ಲಿ ಖಾತೆ ತೆರೆಯಲಾಗುತ್ತಿದೆ. ಮೊದಲ ಕಾಣಿಕೆಯಾಗಿ ಪೇಜಾವರ ಶ್ರೀ ಹೆಸರಿನಲ್ಲಿ ₹ 5 ಲಕ್ಷ ಕಾಣಿಕೆ ನೀಡಲಾಗಿದೆ ಎಂದು ತಿಳಿಸಿದರು.
ರಾಮಮಂದಿರ ನಿರ್ಮಾಣ ಯೋಜನಾ ವೆಚ್ಚ ಎಷ್ಟು ಎಂಬ ಮಾಹಿತಿ ಇಲ್ಲ. ಹಾಗಾಗಿ ದೇಣಿಗೆ ಇಂತಿಷ್ಟೇ ಸಂಗ್ರಹಿಸಬೇಕೆಂಬ ಗುರಿಯೂ ಇಲ್ಲ. ಬ್ಯಾಂಕ್ ಖಾತೆಯ ಸಂಖ್ಯೆಯನ್ನು ಪ್ರಕಟಿಸಿದ ಬಳಿಕ ಸಾರ್ವಜನಿಕರು 1 ರೂ.ನಿಂದ 1 ಕೋಟಿ ರೂ.ವರೆಗೂ ದೇಣಿಗೆ ನೀಡಬಹುದು ಎಂದರು.