ಹಾಸನ: ಸರ್ಕಾರದ ನಿಯಮ ಉಲ್ಲಂಘಿಸಿ ಅಕ್ರಮವಾಗಿ ಕಾಮಗಾರಿಗೆ ಅಡ್ಡಸಿಕ್ಕಿದ ಬಂಡೆಯನ್ನು ಜಿಲೆಟಿನ್ ಬಳಸಿ ಸ್ಪೋಟಿಸಿರುವ ಆರೋಪವಿದ್ದು, ಇದರ ಪರಿಣಾಮ ಸುತ್ತಮುತ್ತಲಿನ 8 ಮನೆಗಳು ಬಿರುಕು ಬಿಟ್ಟಿರುವ ಘಟನೆ ಹಾಸನದ ಕೆಐಎಡಿಬಿ ಸರ್ಕಲ್ ಬಳಿ ನಡೆದಿದೆ.
2017-18ರಲ್ಲಿ ಸರ್ಕಾರದ ವತಿಯಿಂದ ಕೆಐಎಡಿಬಿ ಸಬ್‌ಲೇಔಟ್ 4ರಲ್ಲಿ ರಸ್ತೆ ಕಾಮಗಾರಿ ಮತ್ತು ಚರಂಡಿ ನಿರ್ಮಾಣಕ್ಕಾಗಿ ಟೆಂಡರ್ ಕರೆಯಲಾಗಿತ್ತು. ಈ ಟೆಂಡರ್ ಮೊತ್ತ 9 ಕೋಟಿ 98 ಲಕ್ಷ ರೂ ಆಗಿದ್ದು, ಮೈಸೂರು ಮೂಲದ ಬಾಪೂಜಿ ಕನ್ಸ್ಸ್ಟ್ರಕ್ಷನ್ ಕಂಪನಿ ಪಡೆದುಕೊಂಡಿತ್ತು. ಆದರೆ ಕಳೆದ 4 ವರ್ಷದಿಂದ ಕಾಮಗಾರಿ ನಡೆಯುತ್ತಿದೆಯೇ ಹೊರತು ಅಂತಿಮ ಹಂತಕ್ಕೆ ತಲುಪಿಲ್ಲ.
ಈ ವೇಳೆ ರಸ್ತೆ ಕಾಮಗಾರಿ ನಡೆಸುತ್ತಿರುವ ಸಂದರ್ಭದಲ್ಲಿ ಅಡ್ಡಲಾಗಿ ಬಂಡೆಯೊಂದು ಸಿಕ್ಕಿದೆ. ಸರ್ಕಾರದ ನಿಯಮದ ಪ್ರಕಾರ ಬಂಡೆಯನ್ನು ಯಂತ್ರದ ಮೂಲಕ ಕತ್ತರಿಸಿ ತೆರವುಗೊಳಿಸಬೇಕು. ಆದರೆ ಗುತ್ತಿಗೆದಾರರು ಅಡ್ಡಲಾಗಿ ಸಿಕ್ಕಂತಹ ಬಂಡೆಯನ್ನು ಜಿಲೆಟಿನ್ ಬಳಸಿ ಸ್ಪೋಟಿಸಿದ್ದಾರೆ. ಇದರ ಪರಿಣಾಮ ಕೂಗಳತೆ ದೂರದಲ್ಲಿರುವ 8 ಮನೆಗಳು ಬಿರುಕು ಬಿಟ್ಟಿವೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ಈ ವಿಷಯ ತಿಳಿದ ತಕ್ಷಣವೇ, ಗುತ್ತಿಗೆದಾರ ಹಾನಿಗೊಳಗಾಗಿದ್ದ ಮನೆಯವರ ಬಳಿ ಬಂದು ಪರಿಹಾರ ನೀಡುವುದಾಗಿ ಕಣ್ಣೊರೆಸುವ ತಂತ್ರವನ್ನು ಮಾಡಿದ್ದಾನೆ. ಆತನ ಮಾತು ನಂಬಿದ ಸ್ಥಳೀಯರು ಅದಕ್ಕೆ ಒಪ್ಪಿಕೊಂಡಿದ್ದಾರೆ. ಆದರೆ ಸಾಕಷ್ಟು ದಿನಗಳು ಕಳೆದರೂ ಗುತ್ತಿಗೆದಾರ ಪತ್ತೆಯೇ ಇರಲಿಲ್ಲ. ಇದಷ್ಟೇ ಅಲ್ಲ, ಜಿಲೆಟಿನ್ ಬಳಸಿ ಸ್ಪೋಟಿಸಿದ್ದ ಸ್ಥಳದಲ್ಲಿ, ಸ್ಫೋಟ ನಡೆದಿದೆ ಎನ್ನುವುದರ ಕುರುಹು ಸಹ ಇರಲಿಲ್ಲ. ಈ ಕುರಿತಾಗಿ ಕೆಐಎಡಿಬಿ ಇಲಾಖೆಯ ಅಭಿವೃದ್ಧಿ ಅಧಿಕಾರಿ ಜಗದೀಶ್ ರವರಲ್ಲಿ ಕೇಳಿದಾಗ, ಈ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ತನಿಖೆ ನಡೆಸಲಾಗುವುದು ಎಂದು ಉತ್ತರಿಸಿದ್ದಾರೆ ಎಂದು ನಿವಾಸಿಗಳು ಹೇಳುತ್ತಿದ್ದಾರೆ.