ಹಾಸನ: ನಗರದ ಕೆಲ ಬಡಾವಣೆಗಳಲ್ಲಿ ವಿವಿಧ ಕಾಮಗಾರಿ ಹೆಸರಲ್ಲಿ ಉತ್ತಮ ಸ್ಥಿತಿಯಲ್ಲಿದ್ದ ರಸ್ತೆಗಳನ್ನು ದುರಸ್ತಿ ಮಾಡಲಾಗುತ್ತಿದೆ. ಇದರಿಂದಾಗಿ ನಿತ್ಯ ಈ ಮಾರ್ಗವಾಗಿ ಸಂಚರಿಸುವ ಜನರ ಪಾಡು ಹೇಳತೀರದ್ದಾಗಿದೆ.
ಇಲ್ಲಿನ ರವೀಂದ್ರ ನಗರ, ವಿವೇಕ ನಗರ, ಪೆನ್ಷನ್ ಮೊಹಲ್ಲಾ, ಕುವೆಂಪುನಗರ, ಹೊಸಲೈನ್ ರಸ್ತೆ ಹೀಗೆ 16 ವಾರ್ಡ್ಗಳಲ್ಲಿ ಕಳೆದೊಂದು ವರ್ಷದಿಂದ ಕುಡಿವ ನೀರು ಅಮೃತ್ ಯೋಜನೆ ಮತ್ತು ಯುಜಿಡಿ ಕಾಮಗಾರಿ ನಡೆಯುತ್ತಿದ್ದು, ನಗರದ ಹಲವಾರು ಬಡಾವಣೆಗಳಲ್ಲಿನ ರಸ್ತೆಗಳು ಹಳ್ಳ ಕೊಳ್ಳಗಳಿಂದ ತುಂಬಿಕೊಂಡು ಕೆಸರು ಗದ್ದೆಯಾಗಿ ಮಾರ್ಪಟ್ಟಿದೆ.
ಈಗ ಸುರಿಯುತ್ತಿರುವ ಮಳೆಯಿಂದಾಗಿ ಹಾಗೂ ಕುಂಟುತ್ತಾ ಸಾಗಿರುವ ಕಾಮಗಾರಿಗಳಿಂದಾಗಿ ಸಂಚಾರಕ್ಕೆ ತೊಡಕಾಗಿ ಪರಿಣಮಿಸಿ ವಾಹನ ಸವಾರರು ಎದ್ದು - ಬಿದ್ದು ವಾಹನ ಚಲಾಯಿಸುವ ಸ್ಥಿತಿಗೆ ತಲುಪಿದ್ದಾರೆ.
ನಗರದ ಸಂತೇಪೇಟೆ ಸರ್ಕಲ್‌ನಿಂದ ಗೊರೂರು ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯಂತೂ ಸಂಪುರ್ಣ ಹದಗೆಟ್ಟಿದ್ದು, ರಸ್ತೆ ಮೇಲೆ ತುಂಬಿರುವ ಗುಂಡಿಗಳಿಂದಾಗಿ ಈ ರಸ್ತೆಯಲ್ಲಿ ಸಂಚರಿಸುವುದೇ ಒಂದು ಸಾಹಸದ ಕೆಲಸವಾಗಿದೆ.
ಇನ್ನು ಸಾಲಗಾಮೆ ರಸ್ತೆಯಿಂದ ಸೇಂಟ್ ಜೋಸೆಫ್ ಶಾಲೆಯ ಎದುರು ಹಾದು ಸಂತೇಪೇಟೆ ರಸ್ತೆಯವರೆಗಿನ ರಸ್ತೆಯ ಸ್ಥಿತಿ ಹೇಳತೀರಾದಾಗಿದೆ, ಈ ರೀತಿ ಹೊಯ್ಸಳ ನಗರದ ವೃತ್ತದಲ್ಲೂ ಯುಜಿಡಿ ಕಾಮಗಾರಿ ನಡೆಯುತ್ತಿದ್ದು, ಅಲ್ಲಿನ ರಸ್ತೆಯೇ ಮಾಯವಾಗಿದೆ. ರಸ್ತೆಯ ಬದಲು ಮಣ್ಣು ತುಂಬಿದೆ. ಮಳೆಯಿಂದ ವಾಹನ ಸವಾರರು ಸರ್ಕಸ್ ಮಾಡಿಕೊಂಡು ವಾಹನ ಚಲಾಯಿಸಬೇಕಾದ ಪರಿಸ್ಥಿತಿ ಉಂಟಾಗಿದೆ.