ಹಾಸನ: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಿಲ್ಲೆಯಲ್ಲಿ ವರ್ಗಾವಣೆ ಭರಾಟೆಗೆ ಅಧಿಕಾರಿಗಳು, ನೌಕರರು ಬೆಚ್ಚಿ ಬಿದ್ದಿದ್ದಾರೆ.
ಯಾವ ದಿನ ತಮ್ಮ ವರ್ಗಾವಣೆ ಆದೇಶ ಹೊರಬೀಳುತ್ತದೋ ಎಂಬ ಆತಂಕದಲ್ಲಿಯೇ ಅಧಿಕಾರಿಗಳು ದಿನಗಳನ್ನು ದೂಡುತ್ತಿದ್ದು, ಆಡಳಿತ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರಿದೆ. ಅಭಿವೃದ್ಧಿಗೆ ಕಾಮಗಾರಿಗಳ ಅನುಷ್ಠಾನಕ್ಕೆ ಈ ಮೂಲಕ ಹಿನ್ನಡೆಯಾಗಿದೆ ಎನ್ನಲಾಗುತ್ತಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಡಾ. ಎ.ಎನ್. ಪ್ರಕಾಶ್ ಗೌಡ ಅವರಿಗೆ ಸ್ಥಳ ತೋರಿಸದೇ ವರ್ಗಾವಣೆ ಮಾಡಿದ ಸರ್ಕಾರ, ಅವರ ಸ್ಥಾನಕ್ಕೆ ರಾಮನಿವಾಸ್ ಸೆಪಟ್ ಅವರನ್ನು ವರ್ಗಾವಣೆ ಮಾಡಿತು. ಆನಂತರ ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರು ಆರು ತಿಂಗಳು ಅಧಿಕಾರ ಅವಧಿ ಪೂರ್ಣಗೊಳಿಸುವ ಮುನ್ನವೇ ಅವರಿಗೂ ಸ್ಥಳ ತೋರಿಸಿದೇ ವರ್ಗಾವಣೆ ಮಾಡಿದ ಸರ್ಕಾರ ಹಾಸನ ಜಿಲ್ಲಾಧಿಕಾರಿ ಹುದ್ದೆಗೆ ಆರ್ ಗಿರೀಶ್ ಅವರನ್ನು ವರ್ಗಾಯಿಸಿದೆ.
ಹಾಸನ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಹುದ್ದೆಗೆ ಹಾಸನ ನಗರಸಭೆ ಆಯುಕ್ತರಾಗಿದ್ದ ಬಿ.ಎ. ಪರಮೇಶ್ವರ್ ಅವರನ್ನು ವರ್ಗಾವಣೆ ಮಾಡಿರುವ ಸರ್ಕಾರ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಕೃಷ್ಣಮೂರ್ತಿ ಅವರನ್ನು ಆಯುಕ್ತರ ಹುದ್ದೆಗೆ ವರ್ಗಾವಣೆ ಮಾಡಿದೆ. ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಹುದ್ದೆಗೆ ಬೆಳಗಾವಿ ಜಿಲ್ಲಾ ಪಂಚಾಯತ್ ಪರಿಷತ್ ಕಾರ್ಯದರ್ಶಿಯಾಗಿದ್ದ ಬಿ.ಎ.ಜಗದೀಶ್ ವರ್ಗವಾಗಿ ಬಂದಿದ್ದಾರೆ.
ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ವೆಂಕಟರಮಣ ರೆಡ್ಡಿ ಅವರನ್ನು ವರ್ಗಾವಣೆ ಮಾಡಿ ಅವರ ಸ್ಥಾನಕ್ಕೆ ಹಿಂದೆ ಇದ್ದ ಶ್ರೀಧರ್ ಅವರನ್ನು ಬರಮಾಡಿಕೊಳ್ಳಲಾಗಿದೆ. ಹಾಸನ ನಗರ ಪೊಲೀಸ್ ಸರ್ಕಲ್ ಇನ್ಸ್ಫೆಕ್ಟರ್ ಹುದ್ದೆಯಲ್ಲಿದ್ದ ಸತ್ಯನಾರಾಯಣ ಅವರನ್ನು ವರ್ಗಾಯಿಸಿ ಕೃಷ್ಣರಾಜು ಅವರನ್ನು ನಿಯೋಜಿಸಲಾಗಿದೆ. ಡಿವೈಎಸ್ಪಿಗಳ ವರ್ಗಾವಣೆ ಸದ್ಯದಲ್ಲೇ ನಡೆಯಲಿದೆ ಎಂದು ಹೇಳಲಾಗುತ್ತಿದ್ದು, ಪಿಎಸ್ಐಗಳ ವರ್ಗಾವಣೆ ನಡೆಯುತ್ತಲೇ ಇದೆ. ಅರಸೀಕೆರೆ ನಗರಸಭೆಯ ಆಯುಕ್ತ ಪರಮೇಶ್ವರಪ್ಪ ಅವರನ್ನು ವರ್ಗಾಯಿಸಲಾಗಿದ್ದು, ಹೀಗೆ ಸರಣಿ ವರ್ಗಾವಣೆಯಿಂದ ಅಧಿಕಾರಿಗಳು ಬೆಚ್ಚಿಬಿದ್ದಿದ್ದು, ಕೆಲಸ ಮಾಡುವ ಉತ್ಸವವನ್ನೇ ಕಳೆದುಕೊಂಡಿದ್ದಾರೆ.