ಸಕಲೇಶಪುರ (ಹಾಸನ): ಸ್ಥಳೀಯರಿಗೂ ಮತ್ತು ಪ್ರವಾಸಿಗರಿಗೂ ಸಂಘರ್ಷ ಉಂಟಾಗಬಾರದೆಂಬ ನಿಟ್ಟಿನಲ್ಲಿ ರೆಸಾರ್ಟ್, ಹೋಂ ಸ್ಟೇಗಳನ್ನ ಮುಚ್ಚಲು ಆದೇಶಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ಸಕಲೇಶಪುರ ತಾಲೂಕಿನ ಪ್ರವಾಸಿ ಸ್ಥಳವಾದ ಮಂಜ್ರಾಬಾದ್ ಕೋಟೆಗೆ ಭೇಟಿ ನೀಡಿ ನಂತರ ಮಾತನಾಡಿದ ಅವರು, ಮಂಜ್ರಾಬಾದ್ ಕೋಟೆ ಸಕಲೇಶಪುರ ಭಾಗದಲ್ಲಿ ಪ್ರಮುಖವಾದ ಕೋಟೆ. ರೈನ್ ವಾಟರ್ ಹಾರ್ವೆಸ್ಟಿಂಗ್ ಈ ಹಿಂದೆಯೇ ಮಾಡಿದ್ದಾರೆ. ನಮ್ಮ ಪೂರ್ವಿಕರ ಜ್ಞಾನಕ್ಕೆ ಅಭಾರಿಯಾಗಿದ್ದೇನೆ. ಕೋಟೆಗೆ ಬರುವ ಕೆಲವು ಕಿಡಿಗೇಡಿಗಳು, ಅಲ್ಲಲ್ಲಿ ತಮ್ಮ ಹೆಸರುಗಳನ್ನ ಕೆತ್ತಿರುವುದರಿಂದ ಕೋಟೆಯ ಮೂಲ ಸ್ವರೂಪಕ್ಕೆ ಸ್ವಲ್ಪ ಧಕ್ಕೆಯಾಗಿದೆ. ಕಳೆದ ಬಾರಿ ಕೋಟೆಯ ಅಭಿವೃದ್ದಿಗಾಗಿ ಸುಮಾರು 3 ಕೋಟಿ ರೂ. ಮೀಸಲಿಟ್ಟಿದ್ದರೂ ಸಹ ಕ್ರಿಯಾ ಯೋಜನೆ ಆಗದ ಕಾರಣ, ಇನ್ನೂ ಅಭಿವೃದ್ದಿ ಕಾರ್ಯ ಕೈಗೊಂಡಿಲ್ಲ. ತಕ್ಷಣ ಪುರಾತತ್ವ ಇಲಾಖೆ ವತಿಯಿಂದ ಅನುಮತಿ ಪಡೆದು ಕೋಟೆಯನ್ನ ಅಭಿವೃದ್ದಿ ಪಡಿಸಲಾಗುತ್ತದೆ ಎಂದರು.
ಈ ಭಾಗದಲ್ಲಿ ಸಿಗುವಷ್ಟು ಉತ್ತಮ ಆಮ್ಲಜನಕ ಬೇರೆಲ್ಲೂ ಸಿಗುವುದಿಲ್ಲ. ಹಾಗಾಗಿ ಪ್ರವಾಸಿಗರು ಇಲ್ಲಿಗೆ ಬರಲು ಹಾತೊರೆಯುತ್ತಾರೆ. ಸದ್ಯ ಲಾಕ್ಡೌನ್ ಪರಿಸ್ಥಿತಿ ಇರುವುದರಿಂದ ಪ್ರವಾಸೋದ್ಯಮಕ್ಕೆ ನಷ್ಟವಾಗಿರುವುದು ನಿಜ. ಕನಿಷ್ಠವೆಂದರೂ ಸುಮಾರು 7,000 ಕೋಟಿಯಷ್ಟು ನಷ್ಟವಾಗಿದೆ. ಹೊರ ಊರುಗಳಿಂದ ಬರುವವರಿಂದ ಕೋವಿಡ್ ಹರಡುತ್ತದೆಯೆಂಬ ಭಯ ಇರುವುದರಿಂದ ಸ್ಥಳೀಯರು ಪ್ರವಾಸಿಗರ ಆಗಮನವನ್ನ ವಿರೋಧಿಸುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಈ ಪರಿಸ್ಥಿತಿ ಬದಲಾಗುವುದರಲ್ಲಿ ಅನುಮಾನವಿಲ್ಲ. ಒಂದೇ ಸರಿ ಅಂತರಾಜ್ಯ, ಅಂತರಾಷ್ಟ್ರೀಯ ಪ್ರವಾಸೋದ್ಯಮ ಸದ್ಯದ ಪರಿಸ್ಥಿತಿಯಲ್ಲಿ ತೆರೆದುಕೊಳ್ಳುವುದು ಕಷ್ಟ. ಸ್ಥಳೀಯ ಪ್ರವಾಸೋದ್ಯಮವನ್ನ ಮಾತ್ರ ತೆರೆಯಲು ಅವಕಾಶ ಸಿಗುತ್ತದೆ. ನೋಡು ಬಾ ನಮ್ಮೂರ ಯೋಜನೆಯಲ್ಲಿ ಬೆಳಕಿಗೆ ಬಾರದ ಪ್ರವಾಸಿ ಸ್ಥಳಗಳನ್ನು ಬೆಳಕಿಗೆ ತರಲಾಗುತ್ತಿದೆ ಎಂದರು.