ಹಾಸನ: ಸ್ನಾನ ಮಾಡಲು ಹೋದ ಮೂರು ಮಂದಿ ಯುವಕರು ಹುಣಸವಳ್ಳಿ ಬಳಿ ಇರುವ ಯಗಚಿ ಹೊಳೆಯಲ್ಲಿ ನೀರುಪಾಲಾಗುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ವಿಜಯ ದಶಮಿ ಹಬ್ಬದ ಹಿನ್ನೆಲೆಯಲ್ಲಿ ಜಾನುವಾರುಗಳ ಮೈ ತೊಳೆದು ನದಿಯಲ್ಲಿ ಸ್ನಾನ ಮಾಡಲು ಹೋದಾಗ ಸುಳಿಗೆ ಸಿಲುಕಿ ರತನ್, ಮನು, ಭೀಮರಾಜ ಎಂಬುವರು ಮೃತಪಟ್ಟಿದ್ದು, ಇನ್ನುಳಿದ ಸಂಜಯ್ ಮತ್ತು ಧನು ಎಂಬ ಯುವಕರು ಹರಸಾಹಸಪಟ್ಟು ನೀರಿನಲ್ಲಿ ಈಜಿ ದಡ ಸೇರಿ ಪ್ರಾಣಾಪಾಯದಿಂದ ಪಾರಾಗುತ್ತಿರುವ ವಿಡಿಯೋ ತುಣುಕು ಈಗ ಸಾಮಾಜಿಕ ಜಾಲಾತಾಣದಲ್ಲಿ ಪುಲ್ ವೈರಲ್ ಆಗಿದೆ.
ಇನ್ನು ಈಜು ಬಾರದ ಯುವಕರ ಅಸಾಹಯಕತೆ ನೋಡಿ ವಿಡಿಯೋ ಚಿತ್ರೀಕರಣ ಮಾಡಿದವನ ವಿರುದ್ಧ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿಯೇ ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿನ್ನೆಯಿಂದ ಸುರಿಯುತ್ತಿರುವ ಮಳೆಯಿಂದ ಮೃತದೇಹದ ಹುಡುಕಾಟಕ್ಕಾಗಿ ತೊಂದರೆಯಾಗಿದ್ದು, ಇಂದು ಎನ್ಡಿಆರ್ಎಫ್ ತಂಡ ಆಗಮಿಸುತ್ತಿದೆ. ಅವರೊಂದಿಗೆ ಅಗ್ನಿಶಾಮಕ ದಳದ ಸಿಬ್ಬಂದಿ ಕೂಡ ಕಾರ್ಯಾಚರಣೆಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ ಮಕ್ಕಳು ನೀರಿನಲ್ಲಿ ಮುಳುಗಿ ಎರಡು ದಿನವಾದರೂ ಮೃತದೇಹ ಪತ್ತೆಯಾಗದ ಕಾರಣ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ಪೋಷಕರು ಮತ್ತು ಸ್ಥಳೀಯರಿಂದ ಶಾಸಕರಿಗೆ ಘೇರಾವ್:
ಯುವಕರು ನೀರುಪಾಲಾಗಿ ಎರಡು ದಿನವಾದರೂ ಎನ್ಡಿಆರ್ಎಫ್ ತಂಡವನ್ನು ನಿಯೋಜಿಸಿ ಯುವಕರ ಮೃತದೇಹ ಹುಡುಕಿಸುವ ಪ್ರಯತ್ನ ಮಾಡುತ್ತಿಲ್ಲ ಎಂದು ಮತ್ತು ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆಂದು ಆರೋಪಿಸಿ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರಿಗೆ ಘೇರಾವ್ ಹಾಕಿ ಸ್ಥಳೀಯರು ಮತ್ತು ಯುವಕರ ಪೋಷಕರು ಪ್ರತಿಭಟನೆ ಮಾಡಿದರು.
ಇನ್ನು ಈ ವೇಳೆ ಸ್ಥಳಕ್ಕಾಗಮಿಸಿದ ತಹಶೀಲ್ದಾರ್ ಶರೀನ್ ತಾಜ್ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಬಡವರ ಮಕ್ಕಳು ಅಂದ್ರೆ ನಿಮಗೆ ತಾತ್ಸಾರ. ಅದೇ ಶ್ರೀಮಂತರ ಮಕ್ಕಳಾದರೆ ತ್ವರಿತಗತಿಯಲ್ಲಿ ಕಾರ್ಯಾಚರಣೆ ಮಾಡಿಸುತ್ತೀರಾ. ಎರಡು ದಿನ ಆದರೂ ಕೂಡ ಮುಳುಗು ತಜ್ಞರನ್ನು ಕರೆಯಿಸಿ ಮೃತದೇಹಗಳನ್ನು ಹುಡುಕಿಸುವ ಕಾರ್ಯಕ್ಕೆ ಮುಂದಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.