ಹಾಸನ: ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣ ಇದುವರೆಗೂ ಪತ್ತೆಯಾಗಿಲ್ಲ. ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಸ್ಪಷ್ಟನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳು ಮೇ.11 ರ ಅಂಕಿ ಆಂಶ ಬಿಡುಗಡೆ ಮಾಡಿದ್ದು, ಈವರೆಗೆ ಯಾವುದೇ ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ. ಇದುವರೆಗೆ ಕೊರೊನಾ ಶಂಕಿತರೆಂದು 3205 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಇವರಲ್ಲಿ 1037 ಜನ ಅಂತಾರಾಷ್ಟ್ರೀಯ ಪ್ರಯಾಣಿಕರು ಮತ್ತು ಶಂಕಿತರು ಹಾಗೂ 109 ಜನ ವಿದೇಶಿಯರಾಗಿದ್ದಾರೆ.
ಶೀತ, ನೆಗಡಿ, ಕೆಮ್ಮು ಇರುವ 1,527 ವ್ಯಕ್ತಿಗಳನ್ನು ಪರೀಕ್ಷಿಸಲಾಗಿದೆ. 10 ದಿನದಿಂದ ಜ್ವರ, ಕೆಮ್ಮು, ನೆಗಡಿ ಕಂಡುಬಂದಿರುವ 92 ವ್ಯಕ್ತಿಗಳನ್ನು ಪರೀಕ್ಷಿಸಲಾಗಿದೆ. 2,889 ಜನರ ಗಂಟಲ ದ್ರವವನ್ನು ಪರೀಕ್ಷೆಗೆ ಒಳಪಡಿಸಿದ್ದು ಎಲ್ಲರ ವರದಿ ನೆಗೆಟಿವ್ ಬಂದಿದೆ. 87 ಜನರನ್ನು ಮನೆಯಲ್ಲಿಯೇ ಪ್ರತ್ಯೇಕವಾಗಿರಿಸಿ ನಿಗಾ ವಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.