ಹಾಸನ: ಶಾಲಾ ಕಾಲೇಜುಗಳು ಆರಂಭವಾಗಿದ್ದು, ವಿದ್ಯಾರ್ಥಿಗಳ ಅನುಕೂಲತೆಗೆ ತಕ್ಕಂತೆ ಬಸ್ ಸೌಲಭ್ಯವಿಲ್ಲದೇ ಈಗ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ಮಾಡುವ ಹಂತಕ್ಕೆ ಬಂದಿದ್ದಾರೆ. ಜೊತೆಗೆ ಹಾಸನಕ್ಕೆ ಬರಬೇಕಾದರೆ ಕೆಲವರು 2-3 ಬಸ್ ಬದಲಾವಣೆ ಮಾಡವುದರಿಂದ ಪ್ರಯಾಣಿಕರಿಗೂ ತೊಂದರೆ ಜೊತೆಗೆ ದುಬಾರಿ ಹಣ ತೆರಬೇಕಾದ ಪರಿಸ್ಥಿತಿ ಬಂದಿದ್ದು, ಪ್ರವಾಸಿಗರ ಸಂಖ್ಯೆಯೂ ಕ್ಷೀಣಿಸುತ್ತಿದೆ.
ಹೌದು, ಹಾಸನ ಜಿಲ್ಲೆ ರಸ್ತೆ ರಾಷ್ಟ್ರೀಕರಣವಾಗಿರೋ ಜಿಲ್ಲೆಯಾಗಿರೋದ್ರಿಂದ ಕೆ.ಎಸ್.ಆರ್.ಟಿ.ಸಿ ಸಂಸ್ಥೆ ಪ್ರತಿ ಹಳ್ಳಿ ಹಳ್ಳಿಗೂ ಸಾರಿಗೆ ಬಸ್ಸುಗಳ ಸೌಲಭ್ಯವನ್ನ ಕಲ್ಪಿಸುವ ಕರ್ತವ್ಯ ಸಂಸ್ಥೆಯದ್ದು. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ 570 ಬಸ್ಗಳಲ್ಲಿ ಕೇವಲ 430 ಬಸ್ ಮಾತ್ರ ಸಂಚಾರ ಮಾಡುತ್ತಿವೆ. ಹೀಗಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ.
ಜಿಲ್ಲೆಗೆ ಪ್ರತಿನಿತ್ಯ ಜಿಲ್ಲೆಗೆ ಲಕ್ಷಾಂತರ ಮಂದಿ ಪ್ರವಾಸಿಗರು, ಮತ್ತು ಪ್ರಯಾಣಿಕರು, ಜಿಲ್ಲೆಯ ವಿವಿಧ ಕ್ಷೇತ್ರಗಳಿಗೆ ಮತ್ತು ನಗರಪ್ರದೇಶದಕ್ಕೆ ಬರುತ್ತಾರೆ. ಇದರ ಜೊತೆಗೆ ಸಾವಿರಾರು ಮಂದಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಗರ ಪ್ರದೇಶದ ಶಾಲಾ ಕಾಲೇಜುಗಳಿಗೆ ಬರುವುದರಿಂದ ಸಾರಿಗೆ ಬಸ್ ಕೊರತೆಯಿಂದ ತೊಂದರೆಗೀಡಾಗಿದ್ದಾರೆ. ಕೆಲವು ಸ್ಥಳೀಯ ಸಾರಿಗೆ ಬಸ್ಸುಗಳು ಹಾಸನದ ಹೊರವಲಯದಲ್ಲಿರುವ ಶಾಲಾ ಕಾಲೇಜು ಬಳಿ ನಿಲುಗಡೆ ನೀಡದಿರುವುದರಿಂದ ಸರಿಯಾದ ಸಮಯಕ್ಕೆ ಕಾಲೇಜಿಗೆ ಹೋಗಲು ತೊಂದರೆಯಾಗುತ್ತಿದ್ದು, ಸಂಬಂಧ ಪಟ್ಟ ಅಧಿಕಾರಿಗಳಿಗೆ ಸಾಕಷ್ಟು ಮನವಿ ಮಾಡಿದರು ಸಾರಿಗೆ ಇಲಾಖೆಯವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
ಓದಿ : ಗೋ ಹತ್ಯೆ ನಿಷೇಧ ಬಿಲ್ ತಡೆಹಿಡಿದು, ಉಪಸಭಾಪತಿ ವಿರುದ್ಧ ಕ್ರಮವಹಿಸಿ: ರಾಜ್ಯಪಾಲರಿಗೆ ಕಾಂಗ್ರೆಸ್ ಪತ್ರ
ಬೆಂಗಳೂರು, ಚನ್ನರಾಯಪಟ್ಟಣ, ಸಕಲೇಶಪುರ, ಅರಸೀಕೆರೆ, ಬೇಲೂರು, ಅರಕಲಗೂಡು, ಹೊಳೆನರಸೀಪುರ ಮಾರ್ಗವಾಗಿ ಬರುವ ಬಸ್ಸುಗಳು ಬೈಪಾಸ್ ಮೂಲಕವೇ ಹೋಗುವುದರಿಂದ ಪ್ರಯಾಣಿಕರಿಗೆ, ಹೆಚ್ಚಿನ ಸಮಯ ವ್ಯರ್ಥವಾಗುವ ಜೊತೆಗೆ, ದುಬಾರಿ ಹಣ ತೆರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ದೂರದ ಪ್ರಯಾಣಿಕರು ನಗರ ಪ್ರದೇಶಕ್ಕೆ ಬರಬೇಕಾದ್ರೆ ಬೆಳಗ್ಗೆ 10 ಗಂಟೆಯೊಳಗೆ ಬರಬೇಕು. 10 ಗಂಟೆಯ ನಂತರ ಎಲ್ಲಾ ಬಸ್ಸುಗಳು ಬೈಪಾಸ್ ಮೂಲಕ ಹೊಸ ಬಸ್ ನಿಲ್ದಾಣಕ್ಕೆ ಹೋಗುವುದರಿಂದ ನಗರದೊಳಗೆ ಬರುವ ಪ್ರಯಾಣಿಕರು ಬೈಪಾಸ್ ನಲ್ಲಿ ಇಳಿದು ಮತ್ತೊಂದು ಬಸ್ ಅಥವಾ ದುಬಾರಿ ಹಣಕೊಟ್ಟು ಆಟೋ ಮೂಲಕವೇ ನಗರವನ್ನು ತಲುಪಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಸಾರಿಗೆ ಸಂಸ್ಥೆಗೆ ಪ್ರತಿನಿತ್ಯ 3 ಲಕ್ಷ ಮೌಲ್ಯದ ಇಂಧನ ನಷ್ಟ: ನಮ್ಮಲ್ಲಿ ಪ್ರತಿನಿತ್ಯ 570 ಬಸ್ ಸಂಚಾರ ಮಾಡುತ್ತಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಇನ್ನೂ 100ಕ್ಕೂ ಅಧಿಕ ಬಸ್ಗಳು ಸಂಚರಿಸಲು ಸಾಧ್ಯವಾಗುತ್ತಿಲ್ಲ. ಇದರ ನಡುವೆ ರೈಲ್ವೆ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ಪ್ರತಿನಿತ್ಯ ಹಾಸನದಿಂದ ವಿವಿಧ ಭಾಗಗಳಿಗೆ ಹೋಗುವ ಸಾರಿಗೆ ಬಸ್ ಗಳು ಬೈಪಾಸ್ ಮೂಲಕ ಸಂತೆಪೇಟೆ, ಹಾಗೂ ಭೂವನಹಳ್ಳಿ ಬೈಪಾಸ್ ಮೂಲಕ ಬಳಸಿಕೊಂಡು ಬರಬೇಕು. ಇದರಿಂದ ನಮಗೆ ಹೆಚ್ಚಿನ ಹೊರೆಯಾಗುತ್ತಿದೆ. ಪ್ರನಿನಿತ್ಯ 2 ಲಕ್ಷಕ್ಕೂ ಅಧಿಕ ಮೊತ್ತದ ಇಂಧನ ವ್ಯಯವಾಗುತ್ತಿದೆ. ಹೀಗಾಗಿ ಸಂಸ್ಥೆಗೆ ಸ್ವಲ್ಪ ನಷ್ಟವುಂಟಾಗುತ್ತಿದೆ. ಮುಂದಿನ ದಿನದಲ್ಲಿ ಕೇಂದ್ರ ಕಛೇರಿಯ ಅಧಿಕಾರಿಗಳೊಂದಿಗೆ ಮತ್ತು ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಹೊರೆಯನ್ನು ಕಡಿಮೆಗೊಳಿಸುವ ಪರ್ಯಾಯ ಮಾರ್ಗವನ್ನ ಕಂಡುಕೊಳ್ಳಲಾಗುವುದು. ಸದ್ಯ ಹಾಸನಕ್ಕೆ ಬರುವ ಪ್ರಯಾಣಿಕರಿಗೆ ತೊಂದರೆಯಾಗುತ್ತಿದ್ದು, ಸ್ವಲ್ಪ ದಿವಸ ಸಹಕರಿಸಬೇಕೆಂದು ಕೇಂದ್ರ ಕಚೇರಿಯ ತಾಂತ್ರಿಕ ಅಭಿಯಂತರರು ಮನವಿ ಮಾಡಿದ್ದಾರೆ.
ಹಾಸನದ ಹೊಸ ಬಸ್ ನಿಲ್ದಾಣದಿಂದ ಎನ್.ಆರ್. ವೃತ್ತದವರೆಗೆ ರೈಲ್ವೆ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ಸಾರಿಗೆ ಬಸ್ ಗಳು ಬೈಪಾಸ್ ಮೂಲಕವೇ ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಇದೆ. ಈಗಾಗಲೇ ನಾವು ಇದಕ್ಕೊಂದು ಹೊಸ ಯೋಜನೆ ತರಲು ಚಿಂತನೆ ನಡೆಸಿದ್ದೇವೆ. ಬೆಂಗಳೂರು, ಮಂಗಳೂರು ಕಡೆಯಿಂದ ಬರುವ ಪ್ರಯಾಣಿಕರಿಗೆ ತಾವು ಬಂದ ಬಸ್ ಟಿಕೇಟ್ ಇಟ್ಟುಕೊಂಡು ಇಳಿದು, ಬಳಿಕ 2 ಗಂಟೆಯ ಸಮಯದೊಳಗೆ ನಗರ ಪ್ರವೇಶ ಮಾಡುವ ಯಾವುದೇ ಗ್ರಾಮೀಣಾ ಮತ್ತು ನಗರ ಸಾರಿಗೆ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ನಾವು ಈಗಾಗಲೇ ಕೇಂದ್ರ ಕಚೇರಿಗೆ ಪತ್ರ ಬರೆದಿದ್ದೇವೆ. ಕಚೇರಿಯಿಂದ ಬರುವ ಸೂಚನೆ ಅಥವಾ ಆದೇಶದ ನಂತರ ನಾವು ನಿರ್ಧಾರ ಪ್ರಕಟಿಸುತ್ತೇವೆ. ಏಪ್ರಿಲ್ನಿಂದ ಯೋಜನೆ ಜಾರಿ ಮಾಡಲು ಸಿದ್ಧತೆ ನಡೆಸುತ್ತಿದ್ದೇವೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.