ಹಾಸನ: ಮೂರು ದಿನಗಳ ಕಾಲ ಬಿಡುವು ನೀಡಿದ್ದ ಮಳೆ ಮತ್ತೆ ಚುರುಕುಗೊಂಡಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಭಾನುವಾರದಿಂದ-ಬುಧವಾರ ಸಂಜೆಯವರೆಗೂ ಬಿಡುವು ಕೊಟ್ಟು ಸಂಜೆಯಿಂದಲೇ ಮತ್ತೆ ಚುರುಕಾಗಿದ್ದು, ಜಿಲ್ಲೆಯಾದ್ಯಂತ ಆತಂಕ ಸೃಷ್ಟಿಸಿದೆ.
ಮೂರು ದಿನ ಮಳೆ ಕಡಿಮೆಯಾಗಿದ್ದರಿಂದ ಜಲಾವೃತ ಪ್ರದೇಶಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿತ್ತು. ಹಾಗಾಗಿ ರಸ್ತೆಗಳ ಸಂಪರ್ಕ ಮುಕ್ತವಾಗಿದ್ದವು. ನಿರಾಶ್ರಿತ ಪ್ರದೇಶದಲ್ಲಿದ್ದ ಜನರು ವರುಣನ ಅಬ್ಬರ ತಣ್ಣಗಾದ ತಕ್ಷಣ ಮನೆಗಳತ್ತ ಮುಖ ಮಾಡಿದ್ದರು. ಮಲೆನಾಡು ಮತ್ತು ಅರೆ ಮಲೆನಾಡು ಭಾಗದಲ್ಲಿ ಎಡಬಿಡದೆ ಸುರಿದು ಅವಾಂತರ ಸೃಷ್ಟಿಮಾಡಿದ ಮಳೆರಾಯ ಜನರಿಗೆ ನೆಮ್ಮದಿ ನೀಡದಂತೆ ಇಂದು ತನ್ನ ಆರ್ಭಟವನ್ನು ಶುರು ಮಾಡಿದ್ದಾನೆ.
ಮಲೆನಾಡು ಭಾಗವಾದ ಸಕಲೇಶಪುರ-ಆಲೂರು ಭಾಗದಲ್ಲಿ ಯಥೇಚ್ಛವಾಗಿ ಮಳೆಯಾಗುತ್ತಿದ್ದು, ಹೇಮಾವತಿ ಜಲಾಶಯ ಒಳ ಹರಿವು ಹೆಚ್ಚಳವಾಗಿರುವುದಲ್ಲದೆ ಸಕಲೇಶಪುರದ ಆಜಾದ್ ರಸ್ತೆಯ ಜನರು ಮತ್ತೆ ಸಂಕಷ್ಟಕ್ಕೀಡಾಗಿದ್ದಾರೆ. ಮಂಗಳವಾರ ಶಿರಾಡಿ ರಸ್ತೆಯಲ್ಲಿ ದೊಡ್ಡ ವಾಹನಗಳು ಸಂಚಾರ ಮಾಡಲು ಅನುಮತಿ ನೀಡಲಾಗಿತ್ತು. ಆದರೆ ಇಂದು ಮಳೆ ಅಬ್ಬರದಿಂದ ಮತ್ತೆ ಸಂಚಾರ ಸ್ಥಗಿತಗೊಳಿಸಬಹುದು.
ಚಿಕ್ಕಮಗಳೂರಿನಿಂದ ಧರ್ಮಸ್ಥಳಕ್ಕೆ ಸಂಪರ್ಕ ಕಲ್ಪಿಸಿದ ಚಾರ್ಮುಡಿ ಘಾಟ್ ಗುಡ್ಡ ಕುಸಿತದ ಕಾರಣ ಎಲ್ಲಾ ವಾಹನಗಳು ಮಂಗಳೂರು, ಧರ್ಮಸ್ಥಳ, ದಕ್ಷಿಣ ಕನ್ನಡಕ್ಕೆ ತೆರಳಲು ಶಿರಾಡಿ ಮಾರ್ಗವನ್ನೇ ಅವಲಂಬಿಸಿದ್ದರು. ಆದರೆ ಈಗ ಮಳೆಯ ಅಬ್ಬರದಿಂದ ಮತ್ತೆ ವಾಹನ ಸವಾರರಲ್ಲಿ ದಿಕ್ಕು ತೋರದಂತಾಗಿದೆ.