ಕಾರು-ಬಸ್ ನಡುವೆ ಭೀಕರ ಅಪಘಾತ; ಬೇಲೂರಿನಲ್ಲಿ ಐವರು ವಿದ್ಯಾರ್ಥಿಗಳ ಸಾವು - ಬೇಲೂರಿನಲ್ಲಿ ಭೀಕರ ಅಪಘಾತ
ಬೇಲೂರು ಹೊರವಲಯದ ರಾಷ್ಟ್ರೀಯ ಹೆದ್ದಾರಿಯ ಕಲ್ಕೆರೆ-ಸಂಕೇನಹಳ್ಳಿ ಬಳಿ ಅಪಘಾತ ಸಂಭವಿಸಿದ್ದು ಐವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಘಟನೆಯ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
![ಕಾರು-ಬಸ್ ನಡುವೆ ಭೀಕರ ಅಪಘಾತ; ಬೇಲೂರಿನಲ್ಲಿ ಐವರು ವಿದ್ಯಾರ್ಥಿಗಳ ಸಾವು Terrible accident between KSRTC and car at Belur](https://etvbharatimages.akamaized.net/etvbharat/prod-images/768-512-14801694-1074-14801694-1647943590729.jpg?imwidth=3840)
ಹಾಸನ: ಕೆಎಸ್ಆರ್ಟಿಸಿ ಬಸ್ ಮತ್ತು ಕಾರು ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಕಾರಿನಲ್ಲಿದ್ದ ಐವರು ಮೃತಪಟ್ಟಿರುವ ದಾರುಣ ಘಟನೆ ಬೇಲೂರು ತಾಲೂಕಿನಲ್ಲಿ ನಡೆದಿದೆ.
![Terrible accident between KSRTC and car at Belur](https://etvbharatimages.akamaized.net/etvbharat/prod-images/bigaccident_22032022152329_2203f_1647942809_66.jpg)
ಅಕ್ಮಲ್ ಖಾನ್ (20), ಮಹಮ್ಮದ್ ಜಿಲಾನಿ (20), ಮಹಮದ್ ಕೈಫ್ (20), ಮುಯಿನ್ (22), ರಿಯಾನ್ (22) ಮೃತ ವಿದ್ಯಾರ್ಥಿಗಳು. ಮೃತಪಟ್ಟವರೆಲ್ಲರೂ ಬೇಲೂರು ಪಟ್ಟಣ ಹಾಗೂ ಹಾಸನ ನಗರದ ಮೂಲದವರೆಂದು ತಿಳಿದು ಬಂದಿದೆ.
![Terrible accident between KSRTC and car at Belur](https://etvbharatimages.akamaized.net/etvbharat/prod-images/bigaccident_22032022152329_2203f_1647942809_910.jpg)
ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಹೋಗುತ್ತಿದ್ದ ಸಾರಿಗೆ ಬಸ್ ಅನ್ನು ಹಿಂದಿಕ್ಕುವ ಭರದಲ್ಲಿ ಹಾಗೂ ಅತಿ ವೇಗ ಮತ್ತು ಅಜಾಗರೂಕತೆಯ ಕಾರು ಚಾಲನೆಯಿಂದ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಭೀಕರ ಅಪಘಾತದಲ್ಲಿ ನಾಲ್ವರು ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದರೆ, ಮತ್ತೋರ್ವ ವಿದ್ಯಾರ್ಥಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವಿಗೀಡಾಗಿದ್ದಾನೆ.
ಮೃತರಾದ ಮಹಮದ್ ಕೈಫ್, ಜಿಲಾನಿ ಮತ್ತು ರಿಯಾನ್ ಬೇಲೂರು ಪಟ್ಟಣದ ವಿದ್ಯಾ ವಿಕಾಸ್ ಕಾಲೇಜಿನ ಪಿಯುಸಿ ವಿದ್ಯಾರ್ಥಿಯಾಗಿದ್ದರೆ ಮಹಮದ್ ಮುಹಿನ್ ಹಾಸನದ ಎನ್.ಡಿ.ಆರ್.ಕೆ. ಕಾಲೇಜಿನ ವಿದ್ಯಾರ್ಥಿಯಾಗಿದ್ದಾನೆ. ಮತ್ತೊಬ್ಬ ಮೃತ ಯುವಕ ಅಕ್ಮಲ್ ಖಾನ್ ಗ್ಯಾರೇಜಿನಲ್ಲಿ ಕೆಲಸಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕಂದ್ರನ ಮುಗಿಲು ಮುಟ್ಟಿದೆ.
![Terrible accident between KSRTC and car at Belur](https://etvbharatimages.akamaized.net/etvbharat/prod-images/accident_22032022163306_2203f_1647946986_571.jpg)
ಬೇಲೂರು ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹಗಳನ್ನು ಬೇಲೂರು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಇನ್ನು ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆ ಮುಂದೆ ನೂರಾರು ಮಂದಿ ಜಮಾಯಿಸಿದ್ದಾರೆ.
![Terrible accident between KSRTC and car at Belur](https://etvbharatimages.akamaized.net/etvbharat/prod-images/bigaccident_22032022152329_2203f_1647942809_436.jpg)