ಹಾಸನ(ರಾಮನಾಥಪುರ): ಜಿಲ್ಲೆಯಲ್ಲಿ ವರುಣ ಬಿಡುವು ನೀಡಿದರೂ ಪ್ರವಾಹ ಮಾತ್ರ ಇನ್ನು ನಿಂತಿಲ್ಲ. ಅರಕಲಗೂಡು ತಾಲೂಕಿನಲ್ಲಿ ಹರಿಯುವ ಕಾವೇರಿ ನದಿಯಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ರಾಮನಾಥಪುರದಲ್ಲಿ ಹೊಳೆ ದಂಡೆಯ ಮನೆಗಳು, ತೋಟಗಳು ಸಂಪೂರ್ಣ ಜಲಾವೃತವಾಗಿವೆ. ಅಲ್ಲದೇ ಸಮೀಪದ ಕೊಣನೂರು ತೂಗುಸೇತುವೆ ಮುಳುಗಡೆಯಾಗಿದ್ದು, ಸ್ಥಳೀಯರಿಗೆ ಆತಂಕ ಶುರುವಾಗಿದೆ.
ಕಳೆದ ನಾಲ್ಕೈದು ದಿನದಿಂದ ಸುರಿದ ಮಳೆಯಿಂದ ಹರಿದುಬರುತ್ತಿರುವ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ತಡೆಗೋಡೆ ನಿರ್ಮಾಣ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹ ಮಾಡುತ್ತಿದ್ದಾರೆ. ಆದರೆ, ಮೂರು ವರ್ಷದಿಂದ ತಡೆಗೋಡೆ ನಿರ್ಮಾಣ ಮಾಡಲು ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಮೀನಮೇಷ ಎಣಿಸುತ್ತಿರುವುದರಿಂದ ಪ್ರವಾಹಕ್ಕೆ ಈ ಭಾಗದ ಜನರು ಸಿಲುಕುತ್ತಿದ್ದಾರೆ.
ಈಗಾಗಲೇ ರಾಮನಾಥಪುರದ ಹೊರವಲಯದ ಅರಕಲಗೂಡು ರಸ್ತೆಯಲ್ಲಿ ಪುನರ್ವಸತಿಗಾಗಿ ಸ್ಥಳ ಗುರುತು ಮಾಡಿದ್ದಾರೆ. ಆದರೆ, ಪುರ್ವಜರ ಕಾಲದ ಮನೆಗಳನ್ನ ನಾವು ತೊರೆದು ಎಲ್ಲಿಗೂ ಹೋಗಲು ತಯಾರಿಲ್ಲ. ಅದರ ಬದಲು ನದಿಗೆ ಶಾಶ್ವತವಾಗಿ ಒಂದು ತಡೆಗೋಡೆ ನಿರ್ಮಿಸಿದರೆ ನಮ್ಮ ಮನೆಗಳಿಗೆ ನೀರು ನುಗ್ಗುವುದು ತಪ್ಪುತ್ತದೆ ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.
ಇನ್ನು ಮುನ್ನೆಚ್ಚರಿಕಾ ಕ್ರಮವಾಗಿ ನದಿ ಪಾತ್ರದ ಜನರನ್ನ ಬೇರೆಡೆಗೆ ತೆರಳಲು ಜಿಲ್ಲಾಡಳಿತ ಸೂಚಿಸಿದ್ದು, ನದಿ ಪಾತ್ರದಲ್ಲಿ ಹರಿಯುತ್ತಿರುವ ನೀರು ನೋಡಲು ಜನರು ತಂಡೋಪತಂಡವಾಗಿ ಬರುತ್ತಿರುವುದರಿಂದ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇದರೊಂದಿಗೆ ಸಚಿವ ಗೋಪಾಲಯ್ಯ, ಶಾಸಕರಾದ ಎಟಿ.ರಾಮಸ್ವಾಮಿ ತಡೆಗೋಡೆ ನಿರ್ಮಿಸಿ ಕೊಡುವ ಭರವಸೆ ನೀಡಿದ್ದಾರೆ. ಆದರೆ ಈ ಬಾರಿಯೂ ತಡೆಗೋಡೆ ನಿರ್ಮಾಣ ಕೇವಲ ಭರವಸೆಗಷ್ಟೇ ಸೀಮಿತವಾದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡುತ್ತಿದ್ದಾರೆ ಸ್ಥಳೀಯರು.