ಅರಕಲಗೂಡು: ರಾಮನಾಥಪುರದಲ್ಲಿ ಮರಣ ಹೊಂದಿರುವ ತಂಬಾಕು ಬೆಳೆಗಾರರಿಗೆ 7 ದಿನಗಳೊಳಗೆ ಕ್ಷೇಮಾಭಿವೃದ್ಧಿ ನಿಧಿಯ ಹಣವನ್ನು ಪಾವತಿಸದಿದ್ದಲ್ಲಿ ಕಚೇರಿ ಬಂದ್ ಮಾಡಿ ಹೋರಾಟ ಮಾಡಲಾಗುವುದು ಎಂದು ತಾಲೂಕು ರೈತ ಸಂಘ ಘಟಕದ ಅಧ್ಯಕ್ಷ ಸೀಬಳ್ಳಿ ಯೋಗಣ್ಣ ಎಚ್ಚರಿಕೆ ನೀಡಿದರು.
ರಾಮನಾಥಪುರದ ತಂಬಾಕು ಹರಾಜು ಮಾರುಕಟ್ಟೆಯ ರೈತ ಸಭಾಂಗಣದಲ್ಲಿ ಗುರುವಾರ ನಡೆದ ರಾಜ್ಯ ತಂಬಾಕು ಬೆಳೆಗಾರರ ಸಂಘದಿಂದ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಒಂದು ವರ್ಷದಿಂದ ರಾಮನಾಥಪುರ ತಂಬಾಕು ಹರಾಜು ಮಾರುಕಟ್ಟೆ ವ್ಯಾಪ್ತಿಯ 37 ಬೆಳೆಗಾರರು ಮರಣ ಹೊಂದಿದ್ದು, ಒದಗಿಸಬೇಕಾದ ಎಲ್ಲ ದಾಖಲೆಗಳನ್ನು ಮಂಡಳಿಯ ಕಚೇರಿಗೆ ನೀಡಿದ್ದರೂ ಇದುವರೆಗೂ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಮರಣ ನಿಧಿಯ ಹಣವು ರೈತರ ಕೈ ಸೇರಿರುವುದಿಲ್ಲ. 7 ದಿನಗಳೊಳಗಾಗಿ ರೈತರ ಕುಟುಂಬಕ್ಕೆ ಸೇರಬೇಕಾದ ಹಣವನ್ನು ನೀಡಬೇಕು ಎಂದು ಅವರು ಆಗ್ರಹಿಸಿದರು.
ಸಭೆಯಲ್ಲಿ ಮಾರುಕಟ್ಟೆಯಲ್ಲಿ ರೈತರಿಗಿರುವ ಸಮಸ್ಯೆಗಳು, ಬೆಂಗಳೂರಿನಲ್ಲಿರುವ ತಂಬಾಕು ಮಂಡಳಿಯ ಪ್ರಾದೇಶಿಕ ಕಚೇರಿಯು ತಂಬಾಕು ಬೆಳೆಯುವ ಪ್ರದೇಶಕ್ಕೆ ಸ್ಥಳಾಂತರವಾಗುವ ಮುಂತಾದ ವಿಷಯಗಳನ್ನು ಕುರಿತು ಚರ್ಚಿಸಲಾಯಿತು. ಮರಣ ನಿಧಿಯ ಹಣವನ್ನು ನೀಡುವ ಕುರಿತು ಅಧಿಕಾರಿಗಳಿಗೆ ಮನವಿಪತ್ರ ಸಹ ನೀಡಿದರು.
ಈ ಸಂದರ್ಭದಲ್ಲಿ ತುಳಸಿರಾಮೇಗೌಡ, ಸುಂದ್ರೇಶ್, ನೇತ್ರಪಾಲ್, ಮಲ್ಲೇಶ್, ಕೃಷ್ಣೇಗೌಡ ಸೇರಿದಂತೆ ವಿವಿಧ ಗ್ರಾಮಗಳ ರೈತರು ಮತ್ತು ಮಂಡಳಿಯ ಅಧಿಕಾರಿಗಳಾದ ಪಾಂಡೆ, ಹೇಮಂತ್, ಯೋಗೇಶ್ ಮತ್ತಿತರರಿದ್ದರು.