ಹಾಸನ: ವರ್ಷಕ್ಕೊಮ್ಮೆ ಬಾಗಿಲು ತೆರೆದು ಭಕ್ತರಿಗೆ ದರ್ಶನ ಭಾಗ್ಯ ಕರುಣಿಸುವ ಹಾಸನದ ಅಧಿದೇವತೆ ಮಾತೆ ಶ್ರೀ ಹಾಸನಾಂಬೆ ದರ್ಶನೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದು ಮಧ್ಯಾಹ್ನ 12 ಗಂಟೆಗೆ ದೇವಸ್ಥಾನದ ಬಾಗಿಲು ತೆರೆಯಲಿದ್ದು, ಜಿಲ್ಲಾಡಳಿತ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಈ ವರ್ಷ ಒಟ್ಟು 14 ದಿನ ದೇಗುಲದ ಬಾಗಿಲು ತೆರೆದಿರಲಿದೆ. ಮೊದಲ ಹಾಗೂ ಕೊನೆಯ ದಿನವನ್ನು ಹೊರತುಪಡಿಸಿ ಉಳಿದ 12 ದಿನಗಳ ಕಾಲ 24 ಗಂಟೆಯೂ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಅಕ್ಟೋಬರ್ 30ರಂದು ನಡೆದ ಅಧಿಕಾರಿಗಳ ನೇತೃತ್ವದ ಸಭೆಯಲ್ಲಿ ಮಹತ್ವದ ವಿಚಾರಗಳನ್ನು ಚರ್ಚಿಸಲಾಗಿತ್ತು. ಅದರಂತೆ, ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಯಾವುದೇ ಸಮಸ್ಯೆಯಾಗದಂತೆ ಕ್ರಮವಹಿಸಲಾಗಿದೆ. ದೇಗುಲದ ಗರ್ಭಗುಡಿಯೊಳಗೆ ಯಾರಿಗೂ ಪೂಜೆ, ವಿಶೇಷ ಅರ್ಚನೆಗೆ ಅವಕಾಶ ಇಲ್ಲ.
ಮೊದಲ ದಿನ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ದೇಗುಲದ ಬಾಗಿಲು ತೆರೆಯಲಿದೆ. ನೈವೇದ್ಯ ಪೂಜೆಯ ಬಳಿಕ ಮರುದಿನ ಬೆಳಿಗ್ಗೆಯಿಂದಲೇ ಹಾಸನಾಂಬೆಯ ದರ್ಶನಕ್ಕೆ ಅವಕಾಶ ಸಿಗಲಿದೆ.
ಶಕ್ತಿ ಯೋಜನೆಯಿಂದ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳ: ರಾಜ್ಯ ಸರ್ಕಾರದ ಶಕ್ತಿ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತವಾಗಿರುವುದರಿಂದ ಈ ಬಾರಿ ಹಾಸನಾಂಬ ದೇವಿ ದರ್ಶನಕ್ಕೆ ಬರುವವರ ಭಕ್ತರ ಸಂಖ್ಯೆಯಲ್ಲಿ ಭಾರೀ ಏರಿಕೆ ಆಗಲಿದೆ. ಇದರಿಂದಾಗಿ 24 ಗಂಟೆಗಳ ಕಾಲ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಅದಕ್ಕಾಗಿ ಜಿಲ್ಲಾಡಳಿತ ಎಲ್ಲ ಸಿದ್ಧತೆ ಮಾಡಿಕೊಂಡಿದೆ.
ದೇವಾಲಯದ ವಿಶೇಷತೆಗಳು: 12ನೇ ಶತಮಾನದ ಐತಿಹಾಸಿಕ ಹಾಸನಾಂಬ ದೇವಾಲಯವು ವರ್ಷಕೊಮ್ಮೆ ಮಾತ್ರ ದರ್ಶನ ನೀಡುವ ರಾಜ್ಯದ ಏಕೈಕ ದೇವಾಲಯ. ಪ್ರತೀ ವರ್ಷ ದೀಪಾವಳಿ ಹಬ್ಬದ ವೇಳೆ ಹಾಸನಾಂಬೆ ಭಕ್ತರಿಗೆ ದರ್ಶನ ನೀಡುತ್ತಾಳೆ. ಆಶ್ವಯುಜ ಮಾಸದ ಹುಣ್ಣಿಮೆಯ ನಂತರ ಬರುವ ಗುರುವಾರ ದೇವಸ್ಥಾನದ ಬಾಗಿಲು ತೆರೆದು ಬಲಿಪಾಡ್ಯಮಿಯ ದಿನ ಮುಚ್ಚಲಾಗುತ್ತದೆ.
ಹಿಂದಿನ ವರ್ಷ ದೇವಿಯನ್ನು ಶೃಂಗರಿಸಿದ ಹೂವುಗಳು ಅಷ್ಟೇ ತಾಜಾವಾಗಿರುವುದು ಇಲ್ಲಿನ ವಿಶೇಷತೆ. ಅಷ್ಟೇ ಅಲ್ಲ, ಹಿಂದಿನ ವರ್ಷದಲ್ಲಿ ಹಚ್ಚಿದ ನಂದಾದೀಪ ಕೂಡ ಆರದೇ ಹಾಗೆಯೇ ಉರಿಯುತ್ತಲೇ ಇರುತ್ತದೆ. ಈ ಪವಾಡವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಮೈಸೂರು ಒಂಟಿಕೊಪ್ಪಲು ಪಂಚಾಂಗದ ಪ್ರಕಾರ ಮಂಗಳವಾರವೇ ದೇವಾಲಯ ಬಾಗಿಲು ಮುಚ್ಚುತ್ತಾರೆ. ಹಾಸನಾಂಬೆ ನಗರ ದೇವತೆಯೂ ಆಗಿರುವ ಕಾರಣ ಜಿಲ್ಲೆಗೆ ಹಾಸನ ಎಂಬ ಹೆಸರು ಬಂದಿದೆ ಎಂಬ ಪ್ರತೀತಿ ಇದೆ.
ಇದನ್ನೂ ಓದಿ: ನ.2ರಿಂದ ಹಾಸನಾಂಬೆ ಜಾತ್ರಾ ಮಹೋತ್ಸವ: 24ಗಂಟೆಯೂ ದರ್ಶನ ಭಾಗ್ಯ