ಹಾಸನ: ರಾಜಸ್ಥಾನದ ಅಲ್ವರ್ ಎಂಬಲ್ಲಿ ಗಡಿ ಕಾಯುತ್ತಿದ್ದ ಜಿಲ್ಲೆಯ ಅರಸೀಕೆರೆ ಮೂಲದ ಯೋಧ ಶಿವರಾಜ್ (37) ಹೃದಯಾಘಾತದಿಂದ ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆ ನಿನ್ನೆ ಹುಟ್ಟೂರಲ್ಲಿ ನೆರವೇರಿತು.
ಅರಸೀಕೆರೆ ತಾಲೂಕಿನ ಹಾರನಹಳ್ಳಿ ಸಮೀಪದ ಗುತ್ತಿನಕೆರೆಯ ಶಿವರಾಜ್ ರಾಜಸ್ಥಾನದ ಅಲ್ವರ್ ಎಂಬಲ್ಲಿ ಗಡಿ ಕಾಯುತ್ತಿದ್ದರು. 10 ದಿನಗಳಿಂದ ಎದೆ ನೋವಿನಿಂದ ಬಳಲುತ್ತಿದ್ದ ಅವರನ್ನು ದೆಹಲಿಯ ಮಿಲಿಟರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದ್ರೆ ಹೆಚ್ಚಿನ ಉಸಿರಾಟದ ತೊಂದರೆಯಿಂದ ಸೋಮವಾರದಂದು ಮೃತಪಟ್ಟಿದ್ದಾರೆ. ನಿನ್ನೆ ಮೃತದೇಹವನ್ನು ಅರಸೀಕೆರೆಗೆ ಕರೆತರಲಾಯ್ತು.
ಪಾರ್ಥಿವ ಶರೀರಕ್ಕೆ ಶಾಸಕ ಕೆ.ಎಂ. ಶಿವಲಿಂಗೇಗೌಡ, ಹೂ ಗುಚ್ಛವನ್ನಿರಿಸಿ ಅಂತಿಮ ನಮನ ಸಲ್ಲಿಸಿದರು. ಬಳಿಕ ಸ್ಥಳೀಯ ಮುಖಂಡರು ಮತ್ತು ಪೊಲೀಸ್ ಇಲಾಖೆಯಿಂದ ಗೌರವ ಸಲ್ಲಿಸಿ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಅಂತಿಮ ನಮನ ಸಲ್ಲಿಸಲಾಯಿತು.
ಗೌರವ ವಂದನೆಯ ಬಳಿಕ ಕುಟುಂಬಸ್ಥರಿಗೆ ರಾಷ್ಟ್ರಧ್ವಜವನ್ನು ನೀಡಿ ಪಾರ್ಥಿವ ಶರೀರವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಸಾರ್ವಜನಿಕರಿಗೆ ಕೆಲಕಾಲ ಅಂತಿಮ ದರ್ಶನಕ್ಕೆ ಅವಕಾಶ ನೀಡಿ ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು. ಈ ಸಂದರ್ಭ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.