ಹಾಸನ: ಒಂದು ಪಿಕ್ಚರ್ ತೆರೆ ಕಂಡರೆ ನಿರ್ಮಾಪಕರು ದುಡ್ಡು ಎಷ್ಟು ಕಲೆಕ್ಷನ್ ಆಯ್ತು ಅಂತ ಲೆಕ್ಕ ಹಾಕ್ತಾರೆ. ಆದ್ರೆ ಈ ಚಿತ್ರದ ನಿರ್ಮಾಪಕರು ಮತ್ತು ಚಿತ್ರತಂಡ ಸಾಮಾಜಿಕ ಕಳಕಳಿಯನ್ನು ಮುಂದಿಟ್ಟುಕೊಂಡು ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದಾರೆ.
'ಥರ್ಡ್ ಕ್ಲಾಸ್' ಎಂಬ ವಿಚಿತ್ರ ಶೀರ್ಷಿಕೆ ಇಟ್ಟುಕೊಂಡು ಸಿನಿಮಾ ನಿರ್ಮಾಣ ಮಾಡಿರುವ ಹೊಸಬರ ತಂಡ ಹಾಸನದಲ್ಲಿ ಚಿತ್ರದ ಆಡಿಯೋ ಮತ್ತು ಟ್ರೇಲರ್ ಲಾಂಚ್ ಮಾಡಿದ್ರು. ತಮಿಳುನಾಡಿನಲ್ಲಿ ವಿದ್ಯಾರ್ಥಿನಿಯ ಮೇಲೆ ಫ್ಲೆಕ್ಸ್ ಬಿದ್ದ ದುರಂತದ ಹಿನ್ನೆಲೆಯಲ್ಲಿ ಫ್ಲೆಕ್ಸ್, ಬ್ಯಾನರ್‌ಗಳಿಗೆ ದುಬಾರಿ ಹಣ ಖರ್ಚು ಮಾಡಿ ಪ್ರಚಾರ ಪಡೆಯುವ ಬದಲು ಕೆಲ ಬಡ ಆಟೋ ಚಾಲಕರಿಗೆ, ಅಂಧಮಕ್ಕಳಿಗೆ ಸಹಾಯಹಸ್ತ ಚಾಚಿದೆ. ಈ ಹಿನ್ನೆಲೆಯಲ್ಲಿ ಹಾಸನ ನಗರದ ಆಟೋ ಚಾಲಕರಿಗೆ 1 ಲಕ್ಷ ರೂ ವಿಮೆ ಮತ್ತು ಮೊದಲ ದಿನದ ಗಲ್ಲಪೆಟ್ಟಿಗೆಯ ಲಾಭವನ್ನು ನಗರದ ಅಂಧಮಕ್ಕಳ ಶಾಲೆಗೆ ಹಾಗೂ ನವಜಾತ ಮಕ್ಕಳ ಪೋಷಣಾ ಕೇಂದ್ರ 'ಮಮತೆಯ ಮಡಿಲು' ಸಂಸ್ಥೆಗೆ ಕೊಡುವುದಾಗಿ ಘೋಷಣೆ ಮಾಡುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.