ಹಾಸನ: ರಾಜಪ್ರಭುತ್ವ ವಿದೇಶಿಯರ ಆಳ್ವಿಕೆಯ ದಾಸ್ಯದಿಂದ ಹೊರಬಂದ ಜಗತ್ತಿನ ಶ್ರೇಷ್ಠ ಪ್ರಜಾಪ್ರಭುತ್ವ ರಾಷ್ಟ್ರ ಉದಯಿಸಿದ ಸುದಿನ, ಇದು ಭಾರತದ ಸ್ವಾತಂತ್ರ್ಯ ಸ್ವಾಭಿಮಾನದ ಗೆಲುವಿನ ಸಂಭ್ರಮದ ದಿನ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಹೇಳಿದರು.
ಕೋವಿಡ್ ಇರುವುದರಿಂದ ಈ ಬಾರಿ ಸರಳವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ನಮ್ಮ ದೇಶ ಶಾಂತಿ ಪ್ರಿಯ ರಾಷ್ಟ್ರ. ಸತ್ಯ, ಅಹಿಂಸೆಯ ಮಾರ್ಗದಲ್ಲಿ ಸ್ವಾತಂತ್ರ್ಯ ಗಳಿಸಿದ ನಾಡು. ಆದರೆ ಈ ದೇಶದ ಸ್ವಾತಂತ್ರ್ಯಕ್ಕೆ ಸಾವಿರಾರು ಜನ ತ್ಯಾಗ-ಬಲಿದಾನ ಮಾಡಿದ್ದಾರೆ ಎಂದರು.
ಜಿಲ್ಲೆಯಲ್ಲಿ ಹಾರನಹಳ್ಳಿ ರಾಮಸ್ವಾಮಿ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಜಿ.ಎಸ್ ಸಂಪತ್ ಅಯ್ಯಂಗಾರ್ ಸೇರಿದಂತೆ ನೂರಾರು ಮಂದಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ ಎಂದು ಹೇಳಿದರು. ಕೊರೊನಾದಿಂದ ಗುಣಮುಖರಾದ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರಿಗೆ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಸಚಿವ ಗೋಪಾಲಯ್ಯ ಅಭಿನಂದನೆ ಸಲ್ಲಿಸಿದರು.
ಕೊರೊನಾ ವಾರಿಯರ್ಸ್, ಪೊಲೀಸರಿಗೂ ಅಭಿನಂದನೆ ಸಲ್ಲಿಸಿ ಸರ್ಕಾರದ ಸಾಧನೆ, ಹಾಸನ ಜಿಲ್ಲೆಗೆ ರಾಜ್ಯ ಸರ್ಕಾರದ ಕೊಡುಗೆ ಬಗ್ಗೆ ಪ್ರಸ್ತಾಪಿಸಿದರು.