ಹಾಸನ : ಕೊರೊನಾ ದೇಶದಲ್ಲಿ ಕಾಲಿಟ್ಟ ಮೇಲೆ ಜನಸಾಮಾನ್ಯರು ಅನುಭವಿಸುತ್ತಿರುವ ಕಷ್ಟ ಹೇಳತೀರದಾಗಿದೆ. ಈಗಾಗಲೇ ದೇಶದ ಕೆಲವು ರಾಜ್ಯಗಳಲ್ಲಿ ಲಾಕ್ಡೌನ್ ತೆರವಾಗಿದ್ದರೂ, ಡೆಡ್ಲಿ ವೈರಸ್ ಮಾತ್ರ ಬೆಂಬಿಡದೆ ಕಾಡುತ್ತಿದೆ. ಕರ್ನಾಟಕದಲ್ಲಿಯೂ ಕೂಡ ಕೊರೊನಾ ತನ್ನ ಆರ್ಭಟ ಮುಂದುವರೆಸಿದೆ. ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳನ್ನು ಕೂಡ ಬಿಟ್ಟಿಲ್ಲ.
ಬೆಂಗಳೂರಿನ ವಿಧಾನಸೌಧದಲ್ಲಿ ಸಿಬ್ಬಂದಿಗೆ ಕೊರೊನಾ ಬಂದರೆ, ಕೇವಲ ಸ್ಯಾನಿಟೈಸರ್ ಸಿಂಪಡಿಸಿ ಯಥಾ ಪ್ರಕಾರ ಕೆಲಸ ಮುಂದುವರಿಸುವ ಸರ್ಕಾರ, ಇತರೆ ಜಿಲ್ಲೆಗಳಲ್ಲಿನ ಸರ್ಕಾರಿ ಕಚೇರಿಗಳಲ್ಲಿನ ಸಿಬ್ಬಂದಿಗೆ ಪಾಸಿಟಿವ್ ಬಂದ್ರೆ ಸಂಪೂರ್ಣ ಕಚೇರಿಯನ್ನು ಲಾಕ್ ಮಾಡುವುದು ಎಷ್ಟು ಸರಿ ಎಂಬುದು ಜನ ಸಾಮಾನ್ಯರ ಪ್ರಶ್ನೆ.
ಸದ್ಯ ಬಡಾವಣೆ ಪೊಲೀಸ್ ಠಾಣೆಯ ಇಬ್ಬರು ಸಿಬ್ಬಂದಿಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಮಾರು 52 ಮಂದಿಯನ್ನು ಈಗ ತಪಾಸಣೆಗೊಳಪಡಿಸಿ, ಗಂಟಲು ದ್ರವ ಪರೀಕ್ಷೆ ಮಾಡಲಾಗುತ್ತಿದೆ. ಈ ಪೊಲೀಸ್ ಠಾಣೆಯನ್ನು ಈಗ ಸಂಪೂರ್ಣ ಸೀಲ್‌ಡೌನ್ ಮಾಡಿದ್ದಾರೆ.
ನಗರದಲ್ಲಿಯೇ ಹೆಚ್ಚು ವ್ಯಾಪ್ತಿ ಹೊಂದಿರುವ ಪೊಲೀಸ್ ಠಾಣೆ ಇದಾಗಿದೆ. ಈ ಭಾಗದಲ್ಲಿ ನಡೆಯುವಂತಹ ಕೊಲೆ, ಸುಲಿಗೆ, ಕಳ್ಳತನ, ಅತ್ಯಾಚಾರ ಪ್ರಕರಣ ನಗರದ ಬೇರೆ ಯಾವ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿಯೂ ನಡೆಯುವುದಿಲ್ಲ. ಹೀಗಿರುವಾಗ ಸದ್ಯ ಪೊಲೀಸ್ ಸಿಬ್ಬಂದಿಗೆ ಪಾಸಿಟಿವ್ ಬಂದ ಕಾರಣಕ್ಕೆ ಸಂಪೂರ್ಣವಾಗಿ ಠಾಣೆಯನ್ನು ಸೀಲ್‌ಡೌನ್ ಮಾಡಿರುವುದು ನಾಗರಿಕರಿಗೆ ತುಂಬಾ ತೊಂದರೆ ಅನುಭವಿಸುವಂತಾಗಿದೆ.