ಹಾಸನ: ನಿವೇಶನ, ಖಾಯಂ ನೌಕರಾತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪೌರ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದಿಂದ ಮೌನ ಪ್ರತಿಭಟನೆ ನಡೆಸಲಾಯಿತು.
ಪೌರ ಕಾರ್ಮಿಕರಿಗೆ ನಿವೇಶನ ಸೇರಿದಂತೆ ನೇರ ಪಾವತಿ ಹಾಗೂ ಯುಜಿಡಿ ಹಾಗೂ ಪಾರ್ಕ್ ವಿಭಾಗದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ವಾಟರ್ಮ್ಯಾನ್ಗಳ ಕೆಲಸವನ್ನು ಖಾಯಂಗೊಳಿಸುವಂತೆ ಹಾಗೂ ಇವರಿಗೂ ನಿವೇಶನ ನೀಡಬೇಕು ಎಂದು ಆಗ್ರಹಿಸಲಾಯಿತು.
ಹಾಸನ ನಗರದಲ್ಲಿ 300ಕ್ಕೂ ಹೆಚ್ಚು ಸಿಬ್ಬಂದಿ ನಗರಸಭೆಯ ವಿವಿಧ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, ಈ ಪೈಕಿ 41 ಖಾಯಂ ಪೌರಕಾರ್ಮಿಕರಿಗೆ ಬೇಲೂರು ರಸ್ತೆಯಲ್ಲಿ ಮನೆ ಹಕ್ಕುಪತ್ರ ವಿತರಿಸಿ ಇದೀಗ ಮನೆ ಕಟ್ಟಿಕೊಡುತ್ತಿರುವುದು ಸಂತಸಕರ ವಿಚಾರ. ಅದರಂತೆ ಉಳಿದ ಪೌರ ಕಾರ್ಮಿಕರಿಗೂ ಸಹ ಖಾಯಂ ನೌಕರಾತಿ ಸೇರಿದಂತೆ ನಿವೇಶನವನ್ನು ನೀಡಬೇಕು ಎಂದು ಒತ್ತಾಯಿಸಿದರು.
ಪರಿಶಿಷ್ಟರಿಗೆ ಮೀಸಲಿಟ್ಟ ಹಣವನ್ನು ಈ ಹಿಂದೆ ನಿವೇಶನ ಕೊಳ್ಳಲು ಉಪಯೋಗಿಸಲಾಗಿದ್ದು, ಈ ಬಾರಿಯೂ ಇದೇ ಹಣವನ್ನು ಉಪಯೋಗಿಸಿ ನಿವೇಶನ ಖರೀದಿಸಬೇಕು ಎಂದು ಮನವಿ ಮಾಡಿದರು.
ಕಳೆದ 20 ವರ್ಷಗಳಿಗಿಂತ ಹೆಚ್ಚು ಕಾಲ ಗುತ್ತಿಗೆ ಹಾಗೂ ನೇರ ಪಾವತಿ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದೇವೆ. ಇದರಲ್ಲಿ ಶೇ. 30ರಷ್ಟು ಮಂದಿ ನಿವೃತ್ತಿ ಹಂತಕ್ಕೆ ತಲುಪಿದ್ದಾರೆ. ಕಳೆದ ಹತ್ತಾರು ವರ್ಷಗಳಿಂದ ನೌಕರಾತಿ ಖಾಯಂಗೊಳಿಸುವಂತೆ ಒತ್ತಾಯಿಸಿ ಹೋರಾಟ ನಡೆಸುತ್ತಿದ್ದರೂ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.