ಸಕಲೇಶಪುರ (ಹಾಸನ): ಅಕ್ರಮವಾಗಿ ಕಾಡುಕೋಣ ಮಾಂಸವನ್ನು ಹೊರರಾಜ್ಯಕ್ಕೆ ಸಾಗಿಸುತ್ತಿದ್ದವರ ಜಾಡು ಪತ್ತೆ ಹಚ್ಚಿರುವ ಅರಣ್ಯ ಇಲಾಖೆ ಸಿಬ್ಬಂದಿ ಇಬ್ಬರನ್ನು ಬಂಧಿಸಿದ್ದಾರೆ.
ತಾಲೂಕಿನ ಕಾಡುಮನೆ ಟೀ ಎಸ್ಟೇಟ್ ಸರ್ವೇ ನಂ. 2ರಲ್ಲಿ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸಿದಾಗ, ದಕ್ಷಿಣ ಕನ್ನಡ ಮೂಲದ 6 ವ್ಯಕ್ತಿಗಳು ಕಾಡುಕೋಣ (ಕಾಟಿ) ಮಾಂಸವನ್ನು ಒಣಗಿಸಿ ಕೇರಳ ರಾಜ್ಯಕ್ಕೆ ಸಾಗಿಸುವ ಯತ್ನದಲ್ಲಿದ್ದರು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿದಾಗ, ತಂಡದಲ್ಲಿದ್ದ ಒಟ್ಟು 6 ಮಂದಿಯ ಪೈಕಿ ನಾಲ್ವರು ಪರಾರಿಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಆರೋಪಿಗಳಾದ ಜಾನ್ (46), ಜೋಸ್ (58) ಎಂಬುವರು ಬಂಧಿತರಾಗಿದ್ದು, ಸುಮಾರು 150ಕ್ಕೂ ಹೆಚ್ಚು ಕೆ.ಜಿ. ಮಾಂಸ ಹಾಗೂ ಕೃತ್ಯಕ್ಕೆ ಬಳಸಿದ ಬಂದೂಕು ವಶಪಡಿಸಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಉಪವಲಯ ಅರಣ್ಯಾಧಿಕಾರಿ ಲಿಂಗರಾಜು, ಹೆಚ್ಚುವರಿ ಉಪವಲಯ ಅರಣ್ಯಾಧಿಕಾರಿ ಮಂಜುನಾಥ್, ವಲಯ ಅರಣ್ಯಾಧಿಕಾರಿ ರಾಘವೇಂದ್ರ, ಇನ್ನಿತರರು ಹಾಜರಿದ್ದರು. ಇನ್ನು ನಾಲ್ವರು ಆರೋಪಿಗಳನ್ನು ಬಂಧಿಸಲು ಒಂದು ತಂಡ ರಚಿಸಲಾಗಿದೆ. ಆರೋಪಿಗಳು ಈ ಹಿಂದೆಯು ಶಿಕಾರಿಯಲ್ಲಿ ಭಾಗಿಯಾಗಿರುವ ಮಾಹಿತಿಯಿದೆ.