ಹಾಸನ: ತಮ್ಮ ಮಕ್ಕಳು ವಿದ್ಯಾವಂತರಾಗಲಿ, ಬುದ್ಧಿವಂತರಾಗಲಿ ಜೊತೆಗೆ ಸಮಾಜಕ್ಕೆ ಒಳಿತಾಗುವಂತೆ ಸರ್ಕಾರಿ ಕೆಲಸಕ್ಕೋ ಅಥವಾ ಯಾವುದಾದರೂ ಉನ್ನತ ಹುದ್ದೆಗೆ ಸೇರಿ ಕೀರ್ತಿ ಸಂಪಾದಿಸಲಿ ಅಂತಾ ಹೊಟ್ಟೆಬಟ್ಟೆ ಕಟ್ಟಿ ಶಾಲೆಗೆ ಕಳಿಸೋ ತಂದೆ-ತಾಯಿಗಳನ್ನು ನೋಡಿದ್ದೇವೆ.
ಆದರೆ, ಇಲ್ಲೊಬ್ಬ ತಂದೆ ತನ್ನ ಮಕ್ಕಳಿಗೆ ರೌಡಿಸಂ ಬಗ್ಗೆ ಹೇಳಿಕೊಟ್ಟಿದ್ದಾನೆ. ಜ್ಞಾನ ದೇಗುಲದಲ್ಲಿ ರೌಡಿಸಂ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆಯೊಂದು ನಡೆದಿದೆ.
ಏನಿದು ಪ್ರಕರಣ : ಹಾಸನ ನಗರದ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಈ ಘಟನೆ ಜರುಗಿದೆ. ವಿದ್ಯಾರ್ಥಿಗಳು ಎಂದ ಮೇಲೆ ಸಣ್ಣಪುಟ್ಟ ವೈಮನಸ್ಸು ಬಂದೇ ಬರುತ್ತವೆ. ಆದರೆ, ಅದನ್ನೇ ದೊಡ್ಡದಾಗಿ ಮಾಡಿಕೊಂಡು ಹೋದರೆ ಸಮಾಜದಲ್ಲಿ ಉತ್ತಮ ವಿದ್ಯಾರ್ಥಿಗಳಾಗಲು ಸಾಧ್ಯವಿಲ್ಲ.
ಈ ಹಿಂದೆ ವಿದ್ಯಾರ್ಥಿಗಳ ನಡುವೆ ಉಂಟಾಗಿದ್ದ ವೈಮನಸ್ಸಿಗೆ ತಂದೆ ಕುಮಾರ್ ಎಂಬುವರು ತನ್ನ ಮಕ್ಕಳೊಂದಿಗೆ ಬಂದು ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ, ಹಲ್ಲೆಗೊಳಗಾದ ವಿದ್ಯಾರ್ಥಿಗಳ ಪೋಷಕರು ಮತ್ತು ಸಹೋದರರು ಕಾಲೇಜಿಗೆ ಬಂದು ಪ್ರಶ್ನೆ ಮಾಡಿದ್ದಾರೆ.
ಪ್ರಶ್ನೆ ಮಾಡಿದ ಬಳಿಕ ಮತ್ತೆ ಈ ಮಹಾನ್ ತಂದೆಯ ಪುತ್ರರಾದ ಕಿರಣ್ ಮತ್ತು ಬಾನು ಎಂಬ ವಿದ್ಯಾರ್ಥಿಗಳು ತಮ್ಮ ಜೂನಿಯರ್ಗಳಾದ ಅಶ್ವತ್ಥ ಮತ್ತು ಪ್ರಶಾಂತ್ ಮೇಲೆ ಗಂಭೀರವಾಗಿ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ.
ಘಟನೆ ನಡೆದ ಬಳಿಕ ಸ್ಥಳಕ್ಕೆ ಪೊಲೀಸರು ಆಗಮಿಸಿ ಕಿರಣ್ ಮತ್ತು ಬಾನು ಎಂಬ ಪುಂಡ ವಿದ್ಯಾರ್ಥಿಗಳನ್ನು ಈಗ ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ. ಇನ್ನು, ಇವರಿಬ್ಬರೂ ಅಂತಿಮ ವರ್ಷದ ಕಾನೂನು ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಇವರಿಬ್ಬರ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿದ್ದಾರೆ.