ಹಾಸನ: ಡಿಸೆಂಬರ್ 27ರಂದು ನಡೆದ ರೌಡಿಶೀಟರ್ ಕೊಲೆ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಹಾಸನದ ಶಾಂತಿಗ್ರಾಮ ಪೊಲೀಸರು ಯಶಸ್ವಿಯಾಗಿದ್ದಾರೆ.
ರೌಡಿಶೀಟರ್ ಲೋಕೇಶ್ ಅಲಿಯಾಸ್ ಕೆಂಚ ಲೋಕಿಯನ್ನ ಆಟೋದಲ್ಲಿ ಕರೆದೊಯ್ದು ಕೊಲೆ ಮಾಡಿ ಪರಾರಿಯಾಗಿದ್ದರು.
ತನಿಖೆ ಮುಂದುವರಿಸಿದ ಪೊಲೀಸರು ಕೊಲೆ ಪ್ರಕರಣ ಸಂಬಂಧ ಹಾಸನದ ವಲ್ಲಭಾಯಿ ರಸ್ತೆಯ ಭರತ್, (23) ಹುಣಸಿನಕೆರೆ ಬಡಾವಣೆಯ ಆಟೋಚಾಲಕ ಲೊಕೇಶ್ ಅಲಿಯಾಸ್ ಕುಣಿಯ (25) ಭಾರತ್ ಗ್ಯಾಸ್ ಸಪ್ಲೇಯರ್ ಆಗಿ ಕೆಲಸ ಮಾಡುತ್ತಿದ್ದ, ಅಂಬೇಡ್ಕರ್ ನಗರದ ಸುದೀಪ್ ಅಲಿಯಾಸ್ ಸುದಿ(20) ಹಾಸನಂಬ ದೇವಾಲಯದ ಸಮೀಪ ವಾಸವಿದ್ದ ಅರ್ಜುನ (25) ಮತ್ತು ಹಮಾಲಿ ಕೆಲಸ ಮಾಡುತ್ತಿದ್ದ ಹಳೆ ಮಾರ್ಕೆಟ್ ಸಮೀಪದ ನಿರ್ಮಲ್ ನಗರದ ಜಯಂತ್ ಅಲಿಯಾಸ್ ಬಂಗಾರಿ (21) ಬಂಧಿತ ಆರೋಪಿಗಳಾಗಿದ್ದಾರೆ.
ಕೆಂಚ ಅಲಿಯಾಸ್ ಲೋಕೇಶ್ ರೌಡಿ ಶೀಟರ್ ಆಗಿದ್ದು, ಇತ್ತೀಚೆಗಷ್ಟೇ ಜೈಲಿನಿಂದ ಬೇಲ್ ಮೇಲೆ ಹೊರಬಂದಿದ್ದ. ಜೈಲಿಗೆ ಹೋಗಿ ಬಂದಿದ್ದ ಎಂಬ ಒಂದೇ ಕಾರಣಕ್ಕಾಗಿ ಆಟೋ ಸ್ಟ್ಯಾಂಡ್ನಲ್ಲಿ ವಿನಾಕಾರಣ ರಿಕ್ಷಾ ಚಾಲಕರುಗಳೊಂದಿಗೆ ಜಗಳ ಮಾಡಿ, ಬೆದರಿಸಿ ಹಫ್ತಾ ವಸೂಲಿ ಮಾಡುತ್ತಿದ್ದ. ಇದೇ ಕಾರಣಕ್ಕೆ ಸಿಟ್ಟಿಗೆದ್ದ ಆಟೋಚಾಲಕರು ಆತನಿಗೆ ಹಣ ಕೊಟ್ಟು ಸಮಾಧಾನ ಪಡಿಸಲು ಮುಂದಾಗಿದ್ರು.
ಕೊಲೆಯಾದ ರೌಡಿಶೀಟರ್ಗೆ ಕಂಠಪೂರ್ತಿ ಕುಡಿಸಿ ಆತನನ್ನು ಶಾಂತಿಗ್ರಾಮ ಸಮೀಪದ ಟೋಲ್ ಗೇಟ್ ಬಳಿಯ ಖಾಸಗಿ ಕೆಫೆ ಸೆಂಟರ್ ಹಿಂಭಾಗಕ್ಕೆ ಕರೆದೊಯ್ದು, ಆಟೋದಲ್ಲಿದ್ದ ಕಬ್ಬಿಣದ ರಾಡಿನಿಂದ ಆತನ ತಲೆ ಮತ್ತು ದೇಹದ ವಿವಿಧ ಭಾಗಗಳಿಗೆ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದರು. ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರು ಕೊನೆಗೂ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.