ಹಾಸನ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ನಗರದ ರಸ್ತೆಗಳಲ್ಲಿ ಗುಂಡಿ ಬಿದ್ದಿವೆ. ಇದರಿಂದ ವಾಹನ ಸವಾರರು ಆತಂಕದಲ್ಲೇ ಸಂಚರಿಸಬೇಕಿದೆ.
ಅಮೃತ ಯೋಜನೆ ಅಡಿ ನಗರದ ನಿವಾಸಿಗಳಿಗೆ ನೀರು ಒದಗಿಸಲು ಕಾಮಗಾರಿ ನಡೆಸಲಾಗಿತ್ತು. ಆದರೆ, ಕಾಮಗಾರಿ ನಂತರ ಸುರಿದ ಮಳೆಯಿಂದ ಕಾಮಗಾರಿ ಮಾಡಿದ ರಸ್ತೆಗಳಲ್ಲಿ ಮಣ್ಣು ಕುಸಿದು ಗುಂಡಿ ಬೀಳುತ್ತಿವೆ.
ನಿತ್ಯ ಅನೇಕ ವಾಹನಗಳು ಅಪಾಯದಲ್ಲಿ ಸಂಚರಿಸುತ್ತಿವೆ. ಈಚೆಗೆ ಕೆಲವು ವಾಹನಗಳು ಗುಂಡಿಯಲ್ಲಿ ಸಿಲುಕಿದ್ದು, ಸ್ಥಳೀಯರ ಸಹಾಯದಿಂದ ಮೇಲಕ್ಕೆತ್ತಲಾಗಿತ್ತು. ಲಾಕ್ಡೌನ್ ಹಿನ್ನೆಲೆ ಒಂದು ತಿಂಗಳಿನಿಂದ ರಸ್ತೆ ಕಾಮಗಾರಿಗಳು ಸೇರಿದಂತೆ ಎಲ್ಲಾ ಕೆಲಸಗಳು ಹಾಗೇ ನಿಂತಿವೆ.