ಬೆಂಗಳೂರು: "ಸಿಸಿಎ ನಿಯಮಗಳ ಬಗ್ಗೆ ನಿಮಗೆ ಅರಿವಿಲ್ಲದಿದ್ದರೆ ನೀವು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಅನರ್ಹರು ಎನ್ನುವುದು ನನ್ನ ಭಾವನೆ. ತಾವು ಯಾವುದೇ ಹೇಳಿಕೆ ನೀಡುವಾಗ, ಆರೋಪ ಮಾಡುವಾಗ ಪ್ರಜ್ಞಾವಂತರಲ್ಲಿ 'Fact check' ಮಾಡಿಕೊಂಡು ನಂತರ ಮುಂದುವರೆಯಿರಿ. ಇಲ್ಲದಿದ್ದರೆ ಹಾಸ್ಯಾಸ್ಪದವಾಗುತ್ತೀರಿ" ಎಂದು ಸಚಿವ ಪ್ರಿಯಾಂಕ್ ಖರ್ಗೆ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.
"ಅಮಾನತುಗೊಂಡ ಭ್ರಷ್ಟಾಚಾರಿಗಳನ್ನು ಬೇರೆ ಜಿಲ್ಲೆಗೆ ವರ್ಗಾವಣೆಗೊಳಿಸಲು ಯಾರ ಬಳಿ 'Fact Check' ಮಾಡಿಸಿದ್ದೀರಿ? ಮತ್ತು ಈ ಭ್ರಷ್ಟಾಚಾರದಲ್ಲಿ ನಿಮ್ಮ ಪಾಲೆಷ್ಟು ಪ್ರಿಯಾಂಕ್ ಖರ್ಗೆ ಅವರೇ?" ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ಸಚಿವರು, "ನಿಮ್ಮ ಸರ್ಕಾರದ ದುರಾಡಳಿತವನ್ನು ಜನತೆಗೆ ತಿಳಿಸಲು ನೀವೇ ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು. ಹಗರಣ ನಡೆದಿದ್ದು ನಿಮ್ಮ ಸರ್ಕಾರದಲ್ಲಿ, ಅಮಾನತು ಕ್ರಮ ಜರುಗಿಸಿದ್ದು ನಮ್ಮ ಸರ್ಕಾರದಲ್ಲಿ ಎನ್ನುವುದನ್ನು ಮರೆಯದಿರಿ" ಎಂದು ಟೀಕಿಸಿದರು.
"2020-21ರಿಂದ 2022-23ರವರೆಗೆ ನರೇಗಾ ಯೋಜನೆಯ ಅನುಷ್ಠಾನದಲ್ಲಿ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನಲ್ಲಿ ನಡೆದಿರುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ, ದೇವದುರ್ಗ ತಾಲ್ಲೂಕಿನ ಅಧಿಕಾರಿಗಳು ಸೇರಿ 37 ಅಧಿಕಾರಿಗಳನ್ನು ಅಮಾನತುಗೊಳಿಸಿ ಜನವರಿ 2024ರಲ್ಲಿ ಆದೇಶಿಸಲಾಗಿತ್ತು. ಅವ್ಯವಹಾರ ನಡೆದಿರುವ ಬಗ್ಗೆ ತಿಳಿದರೂ ಯಾವುದೇ ಕ್ರಮ ಜರುಗಿಸದೆ ಕುಳಿತಿದ್ದ ನಿಮ್ಮ ಸರ್ಕಾರ ಭ್ರಷ್ಟಾಚಾರಕ್ಕೆ ಬೆಂಬಲ ನೀಡಿತ್ತಲ್ಲವೇ" ಎಂದು ಪ್ರಶ್ನಿಸಿದರು.
"ಕರ್ನಾಟಕ ನಾಗರಿಕ ಸೇವಾ (ಸಿಸಿಎ) ನಿಯಮಗಳನ್ವಯ ಸರ್ಕಾರಿ ಅಧಿಕಾರಿ/ನೌಕರರನ್ನು 6 ತಿಂಗಳ ಕಾಲದವರೆಗೆ ಅಮಾನತಿನಲ್ಲಿ ಇರಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ, ನಿಮ್ಮ ಸರ್ಕಾರ 2020 ನವೆಂಬರ್ 25ರಂದು ಹೊರಡಿಸಿದ ಆದೇಶದಲ್ಲಿ ಏನಿದೆ ಎಂದು ಒಮ್ಮೆ ಫ್ಯಾಕ್ಟ್ ಚೆಕ್ ಮಾಡಿಕೊಳ್ಳಿ. ಅಮಾನತುಗೊಂಡ ಆರು ತಿಂಗಳ ಅವಧಿಯೊಳಗೆ ಆಪಾದಿತ ನೌಕರನ ವಿರುದ್ಧ ಇಲಾಖಾ ವಿಚಾರಣೆ ಪ್ರಾರಂಭಿಸದಿದ್ದಲ್ಲಿ ಅಥವಾ ನ್ಯಾಯಾಲಯದಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸದಿದ್ದಲ್ಲಿ ಅಂತಹ ನೌಕರನ ಅಮಾನತನ್ನು ರದ್ದುಗೊಳಿಸುವ ಅಥವಾ ಮುಂದುವರೆಸುವ ಬಗ್ಗೆ ಸಕ್ಷಮ ಪ್ರಾಧಿಕಾರವು ವಿಳಂಬವಿಲ್ಲದೇ ತೀರ್ಮಾನಿಸಬೇಕು. ಹಾಗೂ ಈ ಅವಧಿಯೊಳಗೆ ತೀರ್ಮಾನಿಸಿ ಮುಂದುವರೆಸಲು ಆದೇಶಿಸದಿದ್ದಲ್ಲಿ ಅಮಾನತು ಭಾವಿತ (Deemed) ಆಧಾರದ ಮೇಲೆ ಅಂದರೆ ಅಮಾನತಿನ ದಿನಾಂಕದಿಂದ 6 ತಿಂಗಳು ಪೂರ್ಣಗೊಂಡ ದಿನಾಂಕದಿಂದ ರದ್ದಾಗುವುದು ಎಂದು ನಿಮ್ಮದೇ ಸರ್ಕಾರ ಅದೇಶಿಸಿರುವುದು ನಾರಾಯಣಸ್ವಾಮಿಯವರೇ" ಎಂದು ವ್ಯಂಗ್ಯವಾಗಿ ಹೇಳಿದರು.
"ಅವ್ಯವಹಾರದ ಬಗ್ಗೆ ನಡೆಯುತ್ತಿರುವ ತನಿಖೆ ಅಂತಿಮ ಹಂತದಲ್ಲಿದೆ. ಅಧಿಕಾರಿಗಳ ವಿರುದ್ಧದ ಆರೋಪ ಸಾಬೀತಾದ ನಂತರ ಕಠಿಣ ಕ್ರಮ ಜರುಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಅಮಾನತು ಆದ ಅಧಿಕಾರಿ/ಸಿಬ್ಬಂದಿಯನ್ನು ಶಾಶ್ವತವಾಗಿ ಅಮಾನತಿನಲ್ಲಿ ಇಡಲು ನಿಯಮಗಳನ್ವಯ ಸಾಧ್ಯವಿಲ್ಲ. ಹಾಗಾಗಿ ಅವ್ಯವಹಾರದ ಗಂಭೀರತೆಯನ್ನು ಪರಿಗಣಿಸಿ ಅಮಾನತು ಮಾಡಿದ 8/9 ತಿಂಗಳ ನಂತರ ಅಮಾನತುಗೊಂಡ ಅದೇ ಹುದ್ದೆಯಲ್ಲಿ ಮುಂದುವರೆಸದೆ, ನಿಯಮಾನುಸಾರ ಇಲಾಖಾ ವಿಚಾರಣೆ ಬಾಕಿ ಇರಿಸಿ, ರಾಯಚೂರು ಜಿಲ್ಲೆಯ ಹೊರಗಡೆ ಸೇವೆಗೆ ಪುನರ್ ಸ್ಥಾಪಿಸಿ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಲಾಗಿದೆ. ಇದು ನಿಯಮಗಳನ್ನೂ ಪಾಲಿಸಿ, ಭ್ರಷ್ಟಾಚಾರವನ್ನೂ ನಿಗ್ರಹಿಸಲು ನಮ್ಮ ಸರ್ಕಾರ ಕಂಡುಕೊಂಡಿರುವ ಮಾರ್ಗ" ಎಂದರು.
ಇದನ್ನೂ ಓದಿ: ಮುಡಾ ದಾಖಲೆಗಳನ್ನು ಕಾರು, ಹೆಲಿಕಾಪ್ಟರ್ನಲ್ಲಿ ತಂದ ಸಚಿವ ಬೈರತಿ ಸುರೇಶ್ ನಿಜವಾದ ಕಳ್ಳ: ಛಲವಾದಿ ನಾರಾಯಣಸ್ವಾಮಿ