IPL Mega Auction: ಐಪಿಎಲ್ 2025ರ ಮೆಗಾ ಹರಾಜು ಸಮೀಪಿಸುತ್ತಿದೆ. ಇದೇ ತಿಂಗಳು 24 ಮತ್ತು 25ರಂದು ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಸಲವಾದರೂ ಟ್ರೋಫಿ ಗೆಲ್ಲಲೇಬೇಕು ಎಂದು ಪಣ ತೊಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಕೇವಲ ಮೂರು ಆಟಗಾರರನ್ನು ತಂಡದಲ್ಲಿ ಉಳಿಸಿಕೊಂಡು ಹೊಸ ತಂಡ ಕಟ್ಟಲು ಮುಂದಾಗಿದೆ. ಇದಕ್ಕಾಗಿ ಒಟ್ಟು 7 ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲು ಪಟ್ಟಿ ಸಿದ್ಧಪಡಿಸಿಕೊಂಡಿದೆ ಎಂದು ಹೇಳಲಾಗುತ್ತದೆ.
ಮೊಹಮ್ಮದ್ ಶಮಿ: ಈ ಬಾರಿ ಹರಾಜಿನಲ್ಲಿ ಉತ್ತಮ ಬೌಲರ್‌ಗಳನ್ನು ಪಡೆಯಲು ಮುಂದಾಗಿರುವ ಫ್ರಾಂಚೈಸಿ, ಮೊಹಮ್ಮದ್ ಶಮಿ ಅವರ ಮೇಲೆ ಕಣ್ಣಿಟ್ಟಿದೆ. ಏಕದಿನ ವಿಶ್ವಕಪ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಶಮಿ, ವೇಗದ ಬೌಲಿಂಗ್ ಮೂಲಕ ಎದುರಾಳಿ ತಂಡಗಳನ್ನು ಕಟ್ಟಿ ಹಾಕುವ ಸಾಮಥ್ಯ ಹೊಂದಿದ್ದಾರೆ. ಶಮಿ ಇದುವರೆಗೂ ಒಟ್ಟು 110 IPL ಪಂದ್ಯಗಳನ್ನು ಆಡಿದ್ದು, 127 ವಿಕೆಟ್‌ಗಳನ್ನು ಉರುಳಿಸಿದ್ದಾರೆ. 11ಕ್ಕೆ 4 ವಿಕೆಟ್ ಇವರ ಬೆಸ್ಟ್ ಇನ್ನಿಂಗ್ಸ್.
ಯುಜ್ವೇಂದ್ರ ಚಹಾಲ್: RCB ಮಾಜಿ ಬೌಲರ್ ಚಹಾಲ್ ಅತ್ಯಂತ ಯಶಸ್ವಿ ಸ್ಪಿನ್ನರ್‌ಗಳಲ್ಲಿ ಒಬ್ಬರು. ಇವರನ್ನು ಮರಳಿ ತಂಡಕ್ಕೆ ಕರೆದುಕೊಳ್ಳಲು ತಂಡ ಪ್ಲಾನ್ ಮಾಡಿದೆ. ಚಹಾಲ್ ಇದುವರೆಗೂ 160 ಐಪಿಎಲ್ ಪಂದ್ಯಗಳನ್ನಾಡಿದ್ದು 205 ವಿಕೆಟ್ ಪಡೆದಿದ್ದಾರೆ. 40/5 ಇವರ ಅತ್ಯುತ್ತಮ ಸಾಧನೆ.
ರಿಷಭ್ ಪಂತ್: ಪಂತ್ ಕೂಡಾ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಕೆಟ್ ಮತ್ತು ಬ್ಯಾಟರ್ ಆಗಿರುವ ಇವರು, ನಾಯಕನಾಗಿಯೂ ತಂಡವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾರೆ. ಹಾಗಾಗಿ, ವಿಕೆಟ್ ಕೀಪರ್ ಮತ್ತು ನಾಯಕನ ಹುಡುಕಾಟದಲ್ಲಿರುವ ಆರ್‌ಸಿಬಿಗೆ ಪಂತ್ ಬೆಸ್ಟ್ ಆಯ್ಕೆ. ಐಪಿಎಲ್ನಲ್ಲಿ 110 ಪಂದ್ಯಗಳನ್ನಾಡಿ 3,284 ರನ್ ಕಲೆಹಾಕಿದ್ದಾರೆ. ಇದರಲ್ಲಿ 18 ಅರ್ಧಶತಕ, 1 ಶತಕ ಕೂಡ ಸೇರಿದೆ. 128 ಹೈಸ್ಕೋರ್ ಆಗಿದೆ.
ಜೋಸ್ ಬಟ್ಲರ್: ಆರಂಭಿಕ ಬ್ಯಾಟರ್ ಬಟ್ಲರ್ ಯಾವುದೇ ಬೌಲಿಂಗ್ ದಾಳಿಯನ್ನೂ ಸಮರ್ಥವಾಗಿ ನಿಭಾಯಿಸಿ ರನ್ ಮಳೆ ಹರಿಸಬಲ್ಲರು. ಇವರು 107 ಐಪಿಎಲ್ ಪಂದ್ಯಗಳನ್ನಾಡಿದ್ದು 3,582 ರನ್ ಗಳಿಸಿದ್ದಾರೆ. ಇದರಲ್ಲಿ 7 ಶತಕ, 19 ಅರ್ಧಶತಕಗಳು ಸೇರಿವೆ. 124 ಇವರ ಹೈಸ್ಕೋರ್.
ಕೆ.ಎಲ್.ರಾಹುಲ್: ಲಕ್ನೋ ಸೂಪರ್ ಜೈಂಟ್ ತಂಡ ಈ ಬಾರಿ ಕೆ.ಎಲ್.ರಾಹುಲ್ ಅವರನ್ನು ಬಿಡುಗಡೆ ಮಾಡಿದೆ. ರಾಹುಲ್ ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಬೀಸಬಲ್ಲರು ಮತ್ತು ನಾಯಕತ್ವದ ಅನುಭವ ಹೊಂದಿದ್ದಾರೆ. ಇವುಗಳ ಜೊತೆಗೆ ವಿಕೆಟ್ ಕೀಪರ್ ಆಗಿಯೂ ತಂಡಕ್ಕೆ ಆಸರೆಯಾಗುತ್ತಾರೆ. ಇದುವರೆಗೆ ಒಟ್ಟು 132 ಪಂದ್ಯಗಳನ್ನು ಆಡಿದ್ದು, 4,683 ರನ್ ಗಳಿಸಿದ್ದಾರೆ. 4 ಶತಕ, 37 ಅರ್ಧಶತಕಗಳಿವೆ.
ಲಿವಿಂಗ್‌ಸ್ಟನ್: ಈ ಇಂಗ್ಲೆಂಡ್ ಆಲ್‌ರೌಂಡರ್ ಬ್ಯಾಟಿಂಗ್ ಮತ್ತು ಸ್ಪಿನ್ ಬೌಲಿಂಗ್‌ಗೆ ಹೆಸರುವಾಸಿ. ಫಿನಿಶರ್ ಪಾತ್ರ ವಹಿಸುವ ಇವರು ಟಿ20ಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ. 31 ವರ್ಷದ ಲಿವಿಂಗ್‌ಸ್ಟನ್ ಐಪಿಎಲ್ನಲ್ಲಿ 39 ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡಿ 939 ರನ್ಗಳಿಸಿದ್ದಾರೆ. 94 ಇವರ ಹೈಸ್ಕೋರ್. ಇದರಲ್ಲಿ 6 ಅರ್ಧಶತಕಗಳಿವೆ. 22 ಪಂದ್ಯಗಳಲ್ಲಿ 11 ವಿಕೆಟ್ ಪಡೆದಿದ್ದಾರೆ. 27ಕ್ಕೆ 3 ವಿಕೆಟ್ ಬೆಸ್ಟ್ ಇನ್ನಿಂಗ್ಸ್.
ರಚಿನ್ ರವೀಂದ್ರ: ನ್ಯೂಜಿಲೆಂಡ್ ಆಲ್‌ರೌಂಡರ್‌ಗೆ ಬೆಂಗಳೂರು ತಂಡ ಮಣೆ ಹಾಕಲು ಯೋಚಿಸುತ್ತಿದೆ. ಬ್ಯಾಟರ್ಗಳಿಗೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳುವ ಆಟಗಾರನ ಹುಡುಕಾಟದಲ್ಲಿದೆ ಆರ್‌ಸಿಬಿ. ರಚಿನ್ ಇದಕ್ಕೆ ಬೆಸ್ಟ್ ಆಯ್ಕೆ ಆಗಿದ್ದಾರೆ. ಇವರಿಂದ ಬ್ಯಾಟಿಂಗ್ ಲೈನ್-ಅಪ್ ಬಲಪಡಿಸಲು ಫ್ರಾಂಚೈಸಿ ಯೋಚಿಸಿದೆ. ರಚಿನ್ ಇದುವರೆಗೆ ಒಟ್ಟು 10 ಪಂದ್ಯಗಳನ್ನು ಆಡಿದ್ದು, 222 ರನ್ ಗಳಿಸಿದ್ದಾರೆ. 61 ಇವರ ಹೈಸ್ಕೋರ್.
ಇದನ್ನೂ ಓದಿ: ಕ್ರಿಕೆಟ್ ಇತಿಹಾಸದಲ್ಲೇ ಹೆಚ್ಚು ಬಾರಿ ರನೌಟ್: ಇದರಲ್ಲಿದ್ದಾರೆ ಭಾರತದ ಲೆಜೆಂಡರಿ ಆಟಗಾರರು!