ನವದೆಹಲಿ: ಕಳೆದ 10 ವರ್ಷಗಳಿಂದ ವಿಮಾನಯಾನ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ವಿಸ್ತಾರಾ ಏರ್ಲೈನ್ಸ್ ಮಂಗಳವಾರ ನಸುಕಿನಲ್ಲಿ ತನ್ನ ಕಡೇಯ ಹಾರಾಟ ನಡೆಸಿತು. ರಾಷ್ಟ್ರ ರಾಜಧಾನಿ ದೆಹಲಿಯಿಂದ ಸಿಂಗಾಪುರಕ್ಕೆ ಹಾರಾಟ ನಡೆಸುತ್ತಿದ್ದಂತೆ ವಿಸ್ತಾರಾ ಏರ್ಲೈನ್ಸ್ ಏರ್ ಇಂಡಿಯಾದೊಂದಿಗೆ ಅಧಿಕೃತವಾಗಿ ವಿಲೀನಗೊಂಡಿತು.
ಟಾಟಾ ಮತ್ತು ಸಿಂಗಾಪೂರ್ ಏರ್ಲೈನ್ಸ್ ನಡುವಿನ ಜಂಟಿ ಉದ್ಯಮವಾದ ವಿಸ್ತಾರಾ ಇದೀಗ ಏರ್ ಇಂಡಿಯಾ ಜೊತೆ ಸೇರಿಕೊಂಡಿದೆ. ಈ ಮೂಲಕ ದೇಶದ ಅತಿದೊಡ್ಡ ಅಂತಾರಾಷ್ಟ್ರೀಯ ವಿಮಾನ ಸೇವೆ ಮತ್ತು ದೇಶೀಯ ವಿಮಾನ ಸೇವೆಯಲ್ಲಿ ಎರಡನೇ ಸ್ಥಾನ ಪಡೆದಿದೆ.
ವಿಸ್ತಾರದ ಕೊನೇಯ ಅಂತಾರಾಷ್ಟ್ರೀಯ ಹಾರಾಟ ದೆಹಲಿಯಿಂದ ಸಿಂಗಾಪೂರ್ಗೆ ಯುಕೆ ಕೋಡ್ 115ದೊಂದಿಗೆ ಹಾರಾಟ ನಡೆಸಿದರೆ, ದೇಶಿಯ ವಿಮಾನ ಯುಕೆ 986 ಮೂಲಕ ಮುಂಬೈನಿಂದ ದೆಹಲಿಗೆ ಟೇಕ್ ಆಫ್ ಆಯಿತು.
ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ವೈಮಾನಿಕ ಸೇವೆಯಲ್ಲಿ ಹೊಸ ಅಧ್ಯಾಯ ಆರಂಭಿಸಿರುವ ವಿಸ್ತಾರ, ಮೊದಲ ಅಂತಾರಾಷ್ಟ್ರೀಯ ಹಾರಾಟವನ್ನು ಎಐ2286 ಕೋಡ್ ಅಡಿ ದೋಹಾದಿಂದ ಮುಂಬೈಗೆ ನಡೆಸಿದೆ.
ಅಧಿಕೃತ ಮೂಲಗಳ ಪ್ರಕಾರ, ಎರಡು ವಿಮಾನ ಸೇವೆಗಳ ವಿಲೀನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಪ್ರಯಾಣಿಕರಿಗೆ ವಿಮಾನ ನಿಲ್ದಾಣದ ವಿಸ್ತಾರ ಕೌಂಟರ್ನಲ್ಲಿ ಏರ್ ಇಂಡಿಯಾ ಬೋರ್ಡಿಂಗ್ ಪಾಸ್ ನೀಡಲಾಗುತ್ತದೆ. ವಿಸ್ತಾರಾ ವಿಮಾನಗಳು ಎಐ2 ಕೋಡ್ನಡಿ ಕಾರ್ಯಾಚರಣೆ ನಡೆಸಲಿವೆ. ವೀಲಿನ ಘಟಕ 103 ದೇಶಿಯ ಮತ್ತು 71 ಅಂತಾರಾಷ್ಟ್ರೀಯ ಮಾರ್ಗದಲ್ಲಿ ಹಾರಾಟ ನಡೆಸಲಿದೆ.
ಇದನ್ನೂ ಓದಿ: ಪೈಲಟ್ಗಳ ಕೊರತೆ: 70ಕ್ಕೂ ಹೆಚ್ಚಿನ ವಿಮಾನಗಳ ಹಾರಾಟ ರದ್ದುಪಡಿಸಿದ ವಿಸ್ತಾರ ಏರ್ಲೈನ್ಸ್