ಹಾಸನ: ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿ ಹೆಚ್.ಎಲ್ ನಾಗರಾಜು ಅವರ ವರ್ಗಾವಣೆಯನ್ನು ಕೂಡಲೇ ರದ್ದುಪಡಿಸುವಂತೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರೊಂದಿಗೆ ಮಾತನಾಡುತ್ತಾ, ವಿಶೇಷ ಭೂಸ್ವಾಧೀನ ಅಧಿಕಾರಿಗಳ ಕಾರ್ಯಾಲಯ ಹೇಮಾವತಿ ಜಲಾಶಯ ಯೋಜನೆಯಲ್ಲಿ ಅಕ್ರಮ ಭೂಮಿ ಮಂಜೂರಾತಿ ಬಗ್ಗೆ ಉಪವಿಭಾಗಧಿಕಾರಿಯಾಗಿ ಮತ್ತು ಅಪರ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹೆಚ್.ಎಲ್ ನಾಗರಾಜು ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ಹಿಂದಿನ ಸರ್ಕಾರ ರಚಿಸಿತ್ತು. ಹಾಸನ ಜಿಲ್ಲೆಯ ಎಲ್ಲಾ ತಾಲೂಕುಗಳ ಕಡತಗಳನ್ನೂ ಅವರು ಪರಿಶೀಲಿಸಿದ್ದಾರೆ. ಸಕಲೇಶಪುರ, ಬೇಲೂರು, ಆಲೂರು ಹಾಗೂ ಹಾಸನ ಸೇರಿದಂತೆ ಜಿಲ್ಲೆಯ ಇತರೆ ತಾಲೂಕು ಕಚೇರಿಯಲ್ಲಿ 414 ಅಕ್ರಮ ಕಡತಗಳನ್ನು ಪತ್ತೆ ಹಚ್ಚಿದ್ದು, 1,654 ಎಕರೆ ಭೂ ಅಕ್ರಮ ನಡೆದಿದೆ ಎಂದು ನಾಗರಾಜ್ ಅಂಕಿಅಂಶಗಳ ಸಮೇತ ವರದಿ ನೀಡಿದ್ದರು. ಇದೇ ಹಿನ್ನೆಲೆಯಲ್ಲಿ ಸರ್ಕಾರ ಅವರನ್ನು ವರ್ಗಾವಣೆಗೊಳಿಸಿದೆ ಎಂದು ದೂರಿದರು.
ಹೇಮಾವತಿ ಜಲಾಶಯ ಭೂಮಿ ಅಕ್ರಮದ ಕುರಿತು ಸಂಪೂರ್ಣವಾಗಿ ಪ್ರಾಮಾಣಿಕ ತನಿಖೆ ನಡೆಸಿದ ನಾಗರಾಜ್ ಅವರಿಗೆ ಸರ್ಕಾರ ವರ್ಗಾವಣೆಯ ಉಡುಗೊರೆ ನೀಡಿರುವುದು ಎಷ್ಟು ಸರಿ? ಅವರನ್ನು ಅಪರ ಜಿಲ್ಲಾಧಿಕಾರಿಯನ್ನಾಗಿ ಮಾಡಿ ಹೆಚ್ಚುವರಿ ಜವಾಬ್ದಾರಿ ನೀಡಲಾಗಿತ್ತು. ವರದಿ ಬಳಿಕ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಲು ಜಿಲ್ಲಾಧಿಕಾರಿ ಸೂಚನೆ ಸಹ ನೀಡಿದ್ದಾರೆ. ಜಿಲ್ಲೆಯಲ್ಲಿ ಉತ್ತಮ ಅಧಿಕಾರಿ ಎಂದೇ ಹೆಸರು ಪಡೆದಿದ್ದ ಅವರನ್ನು ವರ್ಗಾವಣೆ ಮಾಡುವ ಸರ್ಕಾರದ ಕ್ರಮ ಸರಿಯಲ್ಲ. ಹಾಗಾಗಿ ಕೂಡಲೇ ವರ್ಗಾವಣೆ ಆದೇಶ ರದ್ದುಗೊಳಿಸಬೇಕು ಎಂದು ಯಡಿಯೂರಪ್ಪನವರನ್ನು ಒತ್ತಾಯಿಸಿದ್ರು.
ಎಚ್‌ಆರ್‌ಪಿ ಹಗರಣದ ತನಿಖೆ ವರದಿ ಬಳಿಕ ಇಂತಹ ಕ್ರಮ ಕೈಗೊಂಡಿರುವುದು ಸರ್ಕಾರದ ದುರಾಡಳಿತಕ್ಕೆ ಸಾಕ್ಷಿಯಾಗಿದೆ. ಅಕ್ರಮದಲ್ಲಿ ಯಾವ ಅಧಿಕಾರಿ ಭಾಗಿಯಾಗಿದ್ದರೂ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಿ, ತಕ್ಷಣ ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ಖಜಾನೆಯಲ್ಲಿ ಇಡಬೇಕು. ಇಲ್ಲವಾದರೆ ಎಲ್ಲವನ್ನು ಸುಟ್ಟು ಹಾಕುವ ಸಾಧ್ಯತೆ ಹೆಚ್ಚಿದೆ ಎಂದು ಅವರು ಎಚ್ಚರಿಸಿದರು.
ಹಾಸನಾಂಬ ಜಾತ್ರಾ ಮಹೋತ್ಸವದ ಆಹ್ವಾನ ಪತ್ರಿಕೆಯಲ್ಲಿ ಅನೇಕರ ಹೆಸರು ಕೈಬಿಟ್ಟಿರುವುದು ಸರಿಯಾದ ಕ್ರಮವಲ್ಲ. ಪ್ರೋಟೋಕಾಲ್ ಪಾಲಿಸಬೇಕು ಎಂದರು.