ಅರಕಲಗೂಡು: ತಾಲೂಕಿನಲ್ಲಿ ಕೋವಿಡ್ ತಡೆಗಟ್ಟಲು ಮತ್ತು ರೋಗಿಗಳ ಚಿಕಿತ್ಸೆಗಾಗಿ ಎಷ್ಟೇ ಹಣ ಖರ್ಚಾದರೂ ಒದಗಿಸಿಕೊಡಲು ನಾನು ಸಿದ್ಧನಿದ್ದೇನೆ. ಮೊದಲು ಜನತೆಯ ಪ್ರಾಣ ಉಳಿಸುವ ಕೆಲಸವಾಗಬೇಕಿದೆ ಎಂದು ಶಾಸಕ ಎ.ಟಿ.ರಾಮಸ್ವಾಮಿ ಹೇಳಿದರು.
ಕೊಣನೂರಿನ ಸಮುದಾಯ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿಸಲು ಕೈಗೊಂಡಿರುವ ಸಿದ್ಧತೆ ಪರಿಶೀಲಿಸುವ ಸಂದರ್ಭದಲ್ಲಿ ಮಾತನಾಡಿದರು. ಕೊಣನೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ಆಸ್ಪತ್ರೆಯನ್ನು 5ಂ ಬೆಡ್ಗಳ ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗುವುದು. ಆಕ್ಸಿಜನ್ ಘಟಕವು ಒಂದೆರಡು ದಿನಗಳಲ್ಲಿ ಸಿದ್ಧವಾಗಲಿದೆ. ಈ ಕುರಿತು ಭಾನುವಾರ ಹಾಸನದ ಮಲ್ನಾಡ್ ಆಕ್ಸಿಜನ್ ಘಟಕಕ್ಕೆ ಭೇಟಿ ನೀಡಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಲಿಕ್ವಿಡ್ ಆಕ್ಸಿಜನ್ ಘಟಕ ನಿರ್ಮಾಣ ಮಾಡಿದರೂ ಸಹ ಹಣದ ನೆರವು ನೀಡುತ್ತೇನೆ ಎಂದರು.
ಕೊರೊನಾ ನಿಯಂತ್ರಣಕ್ಕೆ ಮತ್ತು ಚಿಕಿತ್ಸೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇದಕ್ಕಾಗಿ ಅರಲಕಗೂಡು ಆಸ್ಪತ್ರೆಯಲ್ಲಿನ ಲ್ಯಾಬ್ ಉನ್ನತೀಕರಣವು ನಡೆಯುತ್ತಿದೆ. ಕೊಣನೂರಿನ ಆಸ್ಪತ್ರೆಯನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿರಿಸಿದ ನಂತರ ಪಕ್ಕದಲ್ಲೇ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಕೋವಿಡ್‌ಯೇತರ ಹೊರರೋಗಿಗಳ ಚಿಕಿತ್ಸೆಗೆ ಬಳಸಿಕೊಳ್ಳಲಾಗುವುದು. ಅಗತ್ಯ ಬಿದ್ದಲ್ಲಿ ಅಂಬೇಡ್ಕರ್ ಭವನವನ್ನು ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಕೋವಿಡ್ನಿಂದ ಸಂಕಷ್ಟಕ್ಕೀಡಾಗಿರುವ ಕುಟುಂಬಗಳು ಬೀದಿಪಾಲಾಗದಂತೆ ಅವರಿಗೆ ನೆರವು ನೀಡುವ ನಿಟ್ಟಿನಲ್ಲಿ ಸಮೀಕ್ಷೆ ನಡೆಸಿ, ಅವರಿಗೆ ನೆರವಾಗಬೇಕು. ಕೋವಿಡ್ನಿಂದ ಮೃತಪಟ್ಟಿರುವ ಇಬ್ಬರು ನೀರುಗಂಟಿಗಳ ಕುಟುಂಬಕ್ಕೆ ಉದ್ಯೋಗ ಓದಗಿಸಿ ಎಂದು ತಾಪಂ ಇಒ ರವಿಕುಮಾರ್ ಮತ್ತು ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಅವರಿಗೆ ಸೂಚಿಸಿದರು.