ಹಾಸನ: ಕೆಎಸ್ಆರ್ಟಿಸಿ ಹಾಸನ ವಿಭಾಗದ ನೌಕರರ ಮತ್ತು ನಿಗಮದ ಸುರಕ್ಷತೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ನಗರದ ಬಿ.ಎಂ. ರಸ್ತೆ ಬಳಿಯಿರುವ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿ ಮುಂದೆ, ಸಿಐಟಿಯು ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಸಾರಿಗೆ ನೌಕರರ ಸಂಘದಿಂದ ಪ್ರತಿಭಟಿಸಿ ಮನವಿ ಸಲ್ಲಿಸಲಾಯಿತು.
ಲಾಕ್‌ಡೌನ್ ಪರಿಣಾಮವಾಗಿ ಹಾಸನ ವಿಭಾಗದ ನೌಕರರು ಮತ್ತು ಸಿಬ್ಬಂದಿ ವರ್ಗ ಅಪಾರವಾದ ತೊಂದರೆಗಳನ್ನು ಅನುಭವಿಸಿದ್ದಾರೆ. ಈಗ ಸರ್ಕಾರ ನಿಗಮದ ವಾಹನಗಳು ಸಂಚರಿಸಲು ಪರಿಮಿತವಾಗಿ, ಲಾಕ್‌ಡೌನ್ ತೆರವುಗೊಳಿಸಲು ಅವಕಾಶ ನೀಡಿದೆ. ಕೊರೊನಾ ಪಾಸಿಟಿವ್ ಕೇಸ್ಗಳು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಸಂದರ್ಭದಲ್ಲಿ, ಇಂತಹ ತೀರ್ಮಾನ ತೆಗೆದುಕೊಂಡಿರುವುದರಿಂದ ಆತಂಕಗಳ ನಡುವೆ ವಿಭಾಗದ ಸಾರಿಗೆ ಕಾರ್ಮಿಕರು ಕೆಲಸ ಮಾಡಬೇಕಾದ ಒತ್ತಡಗಳು ನಿರ್ಮಾಣವಾಗಿವೆ. ಕಾರ್ಮಿಕರ ಆರೋಗ್ಯ ಮತ್ತು ಸುರಕ್ಷತೆ ಪ್ರಶ್ನೆಗಳು ಗಂಭೀರವಾಗಿ ಎದುರಾಗಿದೆ ಎಂದರು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕೊರೊನಾ ವಿರುದ್ಧ ಸೆಣಸುತ್ತಿರುವ ಎಲ್ಲ ಸಿಬ್ಬಂದಿಗೂ ರೂ.50 ಲಕ್ಷಗಳ ವಿಮೆಯನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಹಿನ್ನೆಲೆ, ವಿಭಾಗದ ಎಲ್ಲ ನೌಕರರಿಗೆ ಕಡ್ಡಾಯವಾಗಿ ರೂ.50 ಲಕ್ಷ ವಿಮೆ ಖಾತ್ರಿಯನ್ನು ಒದಗಿಸಬೇಕು. ಎಲ್ಲ ಸಾರಿಗೆ ಸಿಬ್ಬಂದಿಗೂ, ವಿಶೇಷವಾಗಿ ಚಾಲಕರು, ನಿರ್ವಾಹಕರು ಮತ್ತು ತಾಂತ್ರಿಕ ಸಿಬ್ಬಂದಿಗೆ ಅತ್ಯುತ್ತಮವಾದ ಗುಣಮಟ್ಟದ ಆರೋಗ್ಯ ಸುರಕ್ಷತಾ ಉಪಕರಣಗಳು, ಸ್ಯಾನಿಟೈಸರ್, ಮುಖಗವಸು, ಕೈಗವಸು ಇತ್ಯಾದಿಗಳನ್ನು ಕಡ್ಡಾಯವಾಗಿ ಒದಗಿಸಬೇಕು ಎಂದು ಆಗ್ರಹಿಸಿದರು.
ನಿತ್ಯ ಸಾರಿಗೆ ಬಸ್ಗಳಿಗೆ ಔಷಧ ಸಿಂಪಡಣೆ ಮಾಡುವುದು ಮತ್ತು ಸಿಬ್ಬಂದಿಯ ಆರೋಗ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಕರ್ತವ್ಯಕ್ಕೆ ಹಾಜರಾಗುತ್ತಿರುವ ಕಾರ್ಮಿಕರಿಗೆ ಸರಿಯಾದ ವೈಯಕ್ತಿಕ ರಕ್ಷಣಾ ಸಲಕರಣೆ (ಪಿಪಿಇ) ಗಳನ್ನು ನೀಡಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಕಾರ್ಮಿಕರ ಜೀವ ಮತ್ತು ಜೀವನಗಳ ಸಂಪೂರ್ಣ ರಕ್ಷಣೆ ಹೊಣೆಯನ್ನು ವಿಭಾಗವೇ ಹೊರಬೇಕು. ಕರ್ತವ್ಯಕ್ಕೆ ಹಾಜರಾಗುವ ಕಾರ್ಮಿಕರಿಗೆ ವೈದ್ಯಕೀಯ ಪರೀಕ್ಷೆ ಮತ್ತು ದೃಢೀಕರಣ ಮಾಡುವ ವ್ಯವಸ್ಥೆಯನ್ನು ಆಯಾ ಘಟಕದ ವ್ಯಾಪ್ತಿಯಲ್ಲೇ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಶಿಸ್ತು ಪ್ರಕರಣದ ಮೇಲೆ ಅಮಾನತುಗೊಂಡು 90 ದಿನ ಪೂರ್ಣಗೊಂಡಿರುವ ಎಲ್ಲ ನೌಕರರ ಅಮಾನತು ಕೂಡಲೇ ತೆರವುಗೊಳಿಸಬೇಕು ಹಾಗೂ ನಿವೃತ್ತಿಗೊಂಡಿರುವ ನೌಕರರ ಉಪಧನ, ಭವಿಷ್ಯನಿಧಿ ಇತ್ಯಾದಿ ಹಣಕಾಸು ಸೌಲಭ್ಯಗಳನ್ನು ಕೂಡಲೇ ಒದಗಿಸುವಂತೆ ಒತ್ತಾಯ ಮಾಡಿದರು.