ಹಾಸನ: ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ನಗರದ ಹೇಮಾವತಿ ಪ್ರತಿಮೆ ಬಳಿ ಕರ್ನಾಟಕ ರೈತ ಸಂಘ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಲಾಯಿತು.
ಮಾಧ್ಯಮದವರೊಂದಿಗೆ ಮಾತನಾಡಿದ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬೆಳ್ಳೂರು ಸ್ವಾಮಿಗೌಡ, ರಾಜ್ಯ ಸರ್ಕಾರ ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದು ಉಳುವವನೇ ಭೂಮಿ ಒಡೆಯ ಎಂಬ ಕಾನೂನನ್ನು ಗಾಳಿಗೆ ತೂರಿದೆ ಎಂದರು. ಸರ್ಕಾರ ಈಗಾಗಲೇ ಜಾರಿಗೆ ತರಲಾಗಿರುವ ವಿದ್ಯುತ್ ಶಕ್ತಿ ಕಾಯ್ದೆ, ಭೂ ಸುಧಾರಣ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಮೂಲಕ ದಲ್ಲಾಳಿಗಳನ್ನು ಹಳ್ಳಿ ಒಳಗೆ ಬಿಡಲು ಹೊರಟಿದೆ ಎಂದು ಆರೋಪಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಕೊಟ್ಟೂರು ಶ್ರೀನಿವಾಸ್ ಮಾತನಾಡಿ, ಇಂದಿನ ಸರ್ಕಾರ ರೈತರನ್ನು ಬೀದಿ ಪಾಲು ಮಾಡಲು ಹೊರಟಿದೆ. ಸರ್ಕಾರದ ಕ್ರಮ ವಿರೋಧಿಸಿ ವಿರೋಧಿಸಿ ನಾವು ಸ್ವಾತಂತ್ರ್ಯ ದಿನದಂದು ಕಪ್ಪು ದಿನವನ್ನಾಗಿ ಆಚರಿಸಿದ್ದೇವೆ ಎಂದು ಕಿಡಿಕಾರಿದರು.