ಹಾಸನ: ಪ್ರಗತಿಪರರು ದೇಶವನ್ನ ಪ್ರಗತಿ ಕಡೆಗೆ ತೆಗೆದುಕೊಂಡು ಹೋಗಲಿ. ಅದನ್ನು ಬಿಟ್ಟು ಯಾವುದೋ ಒಂದು ಪಕ್ಷ ಅಥವಾ ಅವರ ಪ್ರಗತಿ ಬಗ್ಗೆ ಚಿಂತನೆ ಮಾಡುವುದನ್ನ ಬಿಡಲಿ ಎಂದು ಹಾಸನ ಶಾಸಕ ಪ್ರೀತಂ ಜೆ.ಗೌಡ ಖಾರವಾಗಿ ನುಡಿದಿದ್ದಾರೆ.
ಹಾಸನದಲ್ಲಿ ನಡೆದ ಗ್ರಂಥಾಲಯ ಕಟ್ಟಡದ ಶಂಕುಸ್ಥಾಪನೆಗೂ ಮುನ್ನ ಮಾತನಾಡಿದ ಅವರು, ದೇವನೂರುನಂತವರೇ ಪೌರತ್ವದ ಬಗ್ಗೆ ವಿರೋಧಿಸುತ್ತಾರೆ ಎಂದರೆ ನಾನೇನು ಮಾತನಾಡಲಿ ಎಂದರು. ಮಂಗಳೂರಿನ ಗೋಲಿಬಾರ್ ಪ್ರಕರಣ ಯೋಜಿತ ಪಿತೂರಿ, ಪ್ರಕರಣ ನಡೆಯಲು ಯಾರು ಕುಮ್ಮಕ್ಕು ನೀಡಿದ್ರು..? ಇದ್ರ ರೂಪು ರೇಷೆಗಳನ್ನ ತಯಾರಿಸಿದ್ದು ಯಾರು ಎಂಬುದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಹೇಳುವ ಮೂಲಕ ಕುಮಾರಸ್ವಾಮಿಯವರ ಅನುಮಾನದ ವಿಡಿಯೊ ಎಂಬ ಮಾತಿಗೆ ಪ್ರತ್ಯುತ್ತರ ನೀಡಿದರು.
ಡಿ.2014 ರ ಮುನ್ನ ಅರ್ಜಿ ಸಲ್ಲಿಸಿರುವವರಿಗೆ ಪೌರತ್ವ ನೀಡುವ ವಿಚಾರವೇ ಹೊರತು, ಭಾರತೀಯರನ್ನ ಹೊರಹಾಕುವ ಕಾಯ್ದೆಯಲ್ಲ. ಯಾರು ತಮ್ಮ ಜೀವನವನ್ನ ನಡೆಸಲು ಸಾಧ್ಯವಿಲ್ಲ ಎಂದು ಶಾರಣಾರ್ಥಿಯಾಗಿ ಭಾರತಕ್ಕೆ ಬಂದಿದ್ದಾರೋ ಅವರಿಗೆ ಪೌರತ್ವ ನೀಡುವುದು ಈ ಕಾಯ್ದೆಯ ಉದ್ದೇಶ.
ವಿರೋಧ ಪಕ್ಷದವರಿಗೆ ಇದು ಯಾಕೆ ಅರ್ಥವಾಗುತ್ತಿಲ್ಲವೋ ಗೊತ್ತಿಲ್ಲ. ನರೇಂದ್ರ ಮೋದಿ, ಬಿಜೆಪಿ ತಪ್ಪು ಮಾಡಲಿ ಎಂದು ಕಾದಿದ್ದಾರೆ. ಆದರೆ, ತಪ್ಪು ಕಾಣದಿದ್ದಾಗ ಇಂತಹ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.