ಹಾಸನ: ಜಿಲ್ಲೆಯ ಆಲೂರು ತಾಲೂಕಿನ ಬೈರಾಪುರ ಗ್ರಾಮದ ಜನರಿಗೆ ಸರ್ಕಾರ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಿತ್ತು, ಆದ್ರೀಗ ಇದು ಕೆಲವು ಖಾಸಗಿ ಮಾರಾಟಗಾರರ ಪಾಲಾಗುತ್ತಿದೆ ಎಂದು ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭೈರಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ಅಕ್ರಮ ನೀರು ಮಾರಾಟ ದಂಧೆಕೋರರ ಪಾಲಾಗಿರುವುದರಿಂದ ಜನರು ಸಂಕಷ್ಟಕ್ಕೆ ಒಳಗಾಗಿದ್ದರೆ. ಇತ್ತ ಖಾಸಗಿಯವರಿಗೆ ಸೀರುಂಡೆ ಸಿಕ್ಕಂತಾಗಿದೆ. ನಿತ್ಯ ದಂಧೆಕೋರರು ವಾಹನದಲ್ಲಿ ಸುಮಾರು 20 ರಿಂದ 25 ಕ್ಯಾನ್ ಸಾಗಿಸುತ್ತಿದ್ದು, 20 ಲೀಟರ್ ಕ್ಯಾನ್‌ಗೆ 40, 50 ರೂಗಳಿಗೆ ಮಾರಾಟ ಮಾಡುತ್ತಿದ್ದಾರೆ. ಇನ್ನೂ ಹೆಚ್ಚುವರಿಯಾಗಿ ಹಣ ನೀಡಿದಲ್ಲಿ ಮನೆಯ ಬಳಿಗೆ ತಂದು ಮಾರುತ್ತಾ ತಮ್ಮ ದಂಧೆಯ ಮಾರ್ಗವನ್ನು ವಿಸ್ತರಿಸಿಕೊಂಡಿದ್ದಾರೆ.
ಸಾರ್ವಜನಿಕರು ಈ ಬಗ್ಗೆ ದಂಧೆಕೋರರನ್ನು ಪ್ರಶ್ನಿಸಿದರೆ, ಉಡಾಫೆಯಿಂದ ವರ್ತಿಸುವುದರ ಜೊತೆಗೆ ಧಮಕಿ ಹಾಕುತ್ತಾರೆ. ಭೈರಾಪುರ ಗ್ರಾಮ ಪಂಚಾಯತ್ ಅಲ್ಲದೇ ಆಲೂರು ಪಟ್ಟಣ ಸೇರಿದಂತೆ ಕೆಲವು ಗ್ರಾಮ ಪಂಚಾಯತ್ಗಳಲ್ಲಿ ಇದೇ ರೀತಿಯ ದಂಧೆ ನಡೆಯುತ್ತಿರುವ ಮಾಹಿತಿ ಇದ್ದು, ಸರ್ಕಾರದಿಂದ ಅಳವಡಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಿತಿಗೆ ಬೇಸತ್ತಿರುವ ಜನತೆ ವಿಧಿ ಇಲ್ಲದೇ ಖಾಸಗಿಯವರ ಮೊರೆ ಹೋಗಬೇಕಾಗಿದೆ. ಅಂತೂ ಜನರಿಗೆ ಶುದ್ಧ ನೀರನ್ನು ನೀಡಬೇಕು ಎನ್ನುವ ಉದ್ದೇಶದಿಂದ ಅಳವಡಿಸಲಾಗಿರುವ ಘಟಕಗಳು ಪ್ರಯೋಜನಕ್ಕೆ ಬಾರದಾಗಿದ್ದು, ಸರ್ಕಾರಿ ಶುದ್ಧ ನೀರಿನ ಘಟಕದಲ್ಲಿ ಮಾರಾಟ ಮಾಡುವ ದಂಧೆಕೋರರಿಗೆ ಕಡಿವಾಣ ಹಾಕಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜನಸಾಮಾನ್ಯರು ಒತ್ತಾಯಿಸಿದ್ದಾರೆ.
ಲ್ಯಾಂಡ್ ಆರ್ಮಿಯವರೇ 5 ವರ್ಷ ಶುದ್ಧ ನೀರಿನ ಘಟಕಗಳನ್ನು ನಿರ್ವಹಣೆ ಮಾಡಬೇಕೆನ್ನುವ ಸರ್ಕಾರದ ಆದೇಶವಿದ್ದರೂ, ಸ್ಥಳೀಯ ಪ್ರಭಾವಿಗಳ ಒತ್ತಾಯಕ್ಕೆ ಮಣಿದು ಕೆಲವು ಸ್ಥಳೀಯ ಜನಪ್ರತಿನಿಧಿಗಳಿಗೆ ವಹಿಸಿಕೊಟ್ಟಿದ್ದಾರೆ. ಅವರು ಸಾರ್ವಜನಿಕರ ಆಸ್ತಿಯನ್ನು ತಮ್ಮ ಆಸ್ತಿಯಂತೆ ಅವರಿಗೆ ಬೇಕಾದಂತೆ ದುರುಪಯೋಗಪಡಿಸಿಕೊಂಡು ಬಡವರ ಹೆಸರಿನಲ್ಲಿ ಲೂಟಿ ಹೊಡೆಯುತ್ತಿದ್ದಾರೆ ಎನ್ನುವ ಮಾತುಗಳು ಜನಸಾಮಾನ್ಯರ ವಲಯದಿಂದ ಕೇಳಿ ಬರುತ್ತಿದೆ.
ಈ ಹಿಂದೆ 20 ಲೀಟರ್ನ ಕ್ಯಾನ್‌ಗೆ 2 ರೂ. ಕಾಯಿನ್ ಹಾಕಿ ನೀರು ಪಡೆಯಬಹುದಾಗಿತ್ತು. ಆದರೀಗ ಇದ್ದಕಿದ್ದಂತೆ 5 ರೂಪಾಯಿ ಕಾಯಿನ್ ಹಾಕಿ 20 ಲೀ ನೀರು ಪಡೆಯುವಂತಾಗಿದೆ. ಆದ್ದರಿಂದ ಇದು ಜನಸಾಮಾನ್ಯರಿಗೆ ಹೊರೆಯಾಗಿದೆ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಅವರನ್ನು ಈ ಬಗ್ಗೆ ಮಾತನಾಡಿಸಿದಾಗ ಶುದ್ಧ ನೀರಿನ ಘಟಕ ಕಾರ್ಯವನ್ನು ಲ್ಯಾಂಡ್ ಆರ್ಮಿಯವರು ನಿರ್ವಹಿಸುತ್ತಿದ್ದು, ಅವರು ಇನ್ನೂ ನಮಗೆ ವಹಿಸಿಕೊಟ್ಟಿಲ್ಲ. ಆದರೂ ನಮ್ಮ ವ್ಯಾಪ್ತಿಗೆ ಬರುವುದರಿಂದ ಈ ಬಗ್ಗೆ ಸಂಬಂಧಪಟ್ಟ ಗ್ರಾಮ ಪಂಚಾಯತ್ಗಳ ಆಡಳಿತಾಧಿಕಾರಿ, ಅಭಿವೃದ್ಧಿಅಧಿಕಾರಿಗಳ ಜೊತೆ ಚರ್ಚಿಸಿ, ಯಾರೇ ಈ ರೀತಿಯ ದಂಧೆ ಮಾಡಿದರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇವೆ ಎನ್ನುತ್ತಾರೆ.
ಒಟ್ಟಾರೆ ಬಡವರಿಗೆ ಕಡಿಮೆ ದರದಲ್ಲಿ ಶುದ್ಧ ಕುಡಿಯುವ ನೀರನ್ನು ನೀಡಬೇಕು ಎನ್ನುವ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಈಗ ಕೆಲವು ದಂಧೆಕೋರರ ಮುಷ್ಟಿಗೆ ಸಿಕ್ಕಿ ನೀರನ್ನು ಕೂಡ ಹೆಚ್ಚಿನ ದರಕ್ಕೆ ಮಾರಾಟ ಮಾಡುವಂತಾಗಿದೆ. ಇನ್ನಾದರೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಎಚ್ಚೆತ್ತು ಅವ್ಯವಸ್ಥೆ ಸರಿಪಡಿಸಿ ತಪ್ಪಿತಸ್ಥ ದಂಧೆಕೋರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಜನಸಾಮಾನ್ಯರ ಒತ್ತಾಯವಾಗಿದೆ.