ಹಾಸನ: ಶಾಲಾ ಕಟ್ಟಡದ ಒಂದು ಭಾಗ ನೆಲಕ್ಕುರುಳಿದ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಚನ್ನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಕಟ್ಟಡದಲ್ಲಿ ಇಂದು ಶಾಲೆ ಪ್ರಾರಂಭವಾಗುವ ಮುನ್ನವೇ ಈ ದುರ್ಘಟನೆ ಸಂಭವಿಸಿದೆ. ಹಾಗಾಗಿ ಮಕ್ಕಳು ಪ್ರಾಣಾಪಾಯದಿಂದ ದೊಡ್ಡ ದುರಂತ ತಪ್ಪಿದೆ.
ಶಾಲಾ ಕಟ್ಟಡದ ಗೋಡೆಗಳು ಬಿರುಕು ಬಿಟ್ಟಿದ್ದು, ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಆದ್ರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಗ್ರಾಮಸ್ಥರ ಆರೋಪ.
ಈ ಶಾಲೆಯಲ್ಲಿ ಸುಮಾರು 20 ರಿಂದ 25 ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಭಯದ ನಡುವೆಯೇ ಪಾಠ ಕೇಳುವಂತಹ ಪರಿಸ್ಥಿತಿ ಇದೆ. ಸೆಪ್ಟಂಬರ್ 23ರಂದು ತಾಲೂಕಿನಾದ್ಯಂತ ಸುರಿದ ಮಳೆಗೆ ಗೋಡೆ ಮತ್ತಷ್ಟು ಬಿರುಕು ಬಿಟ್ಟಿದ್ದು, ಬೆಳಗ್ಗೆ ಶಾಲೆ ಪ್ರಾರಂಭವಾಗುವ ಮುನ್ನ ನೆಲಕ್ಕೆ ಅಪ್ಪಳಿಸಿದೆ.
ಘಟನಾ ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಲತಾ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.