ಹಾಸನ: ಸೋಮವಾರದಿಂದ ಆರಂಭವಾಗುವ ಬಿತ್ತನೆ ಆಲೂಗಡ್ಡೆಯನ್ನು ರೈತರು ವ್ಯಾಪಾರ ಮಾಡುವ ಬಗ್ಗೆ ಎಪಿಎಂಸಿ ಸಭಾಂಗಣದಲ್ಲಿ ವರ್ತಕರ ಜೊತೆ ಅಧ್ಯಕ್ಷ ಮಂಜೇಗೌಡ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ನಿರ್ದೇಶನದಂತೆ ವರ್ತಕರು ಒಪ್ಪಿಗೆ ನೀಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಮಾತನಾಡಿ, ಆಲೂಗಡ್ಡೆ ಬಿತ್ತನೆ ಬೀಜ ವ್ಯಾಪಾರ ಸೋಮವಾರದಿಂದ ಆರಂಭವಾಗಲಿದ್ದು, ಈ ವೇಳೆ ಜನಜಂಗುಳಿ ಸೇರುವ ಮುನ್ಸೂಚನೆ ಇರುವುದರಿಂದ ಎಪಿಎಂಸಿ ಸಭಾಂಗಣದಲ್ಲಿ ವರ್ತಕರ ಸಭೆ ಕರೆದು ಚರ್ಚೆಯ ಮೂಲಕ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಬಿತ್ತನೆ ಬೀಜ ಇರಬಹುದು, ಈರುಳ್ಳಿ ಸೇರಿದಂತೆ ಯಾವುದೇ ಲೋಡ್ ಬಂದಾಗ ನಗರಕ್ಕೆ ಬರಲು ಅವಕಾಶ ಇರುವುದಿಲ್ಲ. ಹೊರ ರಾಜ್ಯದಿಂದ ಯಾವುದೇ ಲಾರಿ ಬಂದರೂ ನೇರವಾಗಿ ನಗರದ ಹೊರ ವಲಯದಲ್ಲಿರುವ ಕೈಗಾರಿಕಾ ಪ್ರದೇಶಕ್ಕೆ ಹೋಗಬೇಕು. ಇಲ್ಲಿಂದ ಸ್ಥಳೀಯ ಲಾರಿ ಬಂದು ಲೋಡ್ ಮಾಡಿಕೊಂಡು ಎಪಿಎಂಸಿ ಮಾರುಕಟ್ಟೆಗೆ ಬರಲು ಸೂಚಿಸಲಾಗಿದೆ. ಇಲ್ಲಿ ಹತ್ತು ಎಕರೆ ಜಾಗವನ್ನು ಗುರುತಿಸಲಾಗಿದ್ದು, ಪೊಲೀಸ್ ಸೆಕ್ಯುರಿಟಿ ಇರಲಿದೆ. ಒಳಗಡೆ ಬಂದ ಮೇಲೆ ಹೊರಗೆ ಬರೋ ಹಾಗಿಲ್ಲ. ಇಲ್ಲೇ ವೈದ್ಯರಿಂದ ತಪಾಸಣೆಗೆ ಒಳಪಡಿಸಲಾಗುವುದು ಎಂದು ತಿಳಿಸಿದರು.
ತರಕಾರಿ ವಹಿವಾಟಿಗೆ ಮಾತ್ರ ಎಪಿಎಂಸಿಯಲ್ಲಿ ಅವಕಾಶ ಮಾಡಿಕೊಡಲಾಗುವುದು. ಮುಂಜಾನೆ 4ರಿಂದ ಬೆಳಿಗ್ಗೆ 9 ಗಂಟೆ ಒಳಗೆ ತರಕಾರಿ ವ್ಯಾಪಾರ ವಹಿವಾಟು ಸೇರಿ ಏನೇ ಇದ್ದರೂ ಮುಗಿಸಬೇಕು. 9 ಗಂಟೆಯಿಂದ 10 ಗಂಟೆಗೆ ಆಲೂಗಡ್ಡೆ ವಹಿವಾಟಿಗೆ ಅವಕಾಶ ಕಲ್ಪಿಸಲಾಗಿದೆ. ಬಿತ್ತನೆ ಆಲೂಗಡ್ಡೆ ವರ್ತಕರು 10 ಗಂಟೆಯ ನಂತರ ತಮ್ಮ ವ್ಯಾಪಾರವನ್ನು ಪ್ರಾರಂಭಿಸಬಹುದಾಗಿದೆ. ಬೆಳಿಗ್ಗೆ 10 ಗಂಟೆಗೆ ಬಿತ್ತನೆ ಆಲೂಗಡ್ಡೆ ವ್ಯಾಪಾರ ಮಾಡಲು ಬರುವ ರೈತರನ್ನು ಹಂತ ಹಂತವಾಗಿ ಎಪಿಎಂಸಿ ಆವರಣಕ್ಕೆ ಬಿಡಲಾಗುವುದು. ಸಂಜೆ 5 ಗಂಟೆಯವರೆಗೂ ರೈತರು ಆಲೂಗಡ್ಡೆ ಬಿತ್ತನೆ ಬೀಜವನ್ನು ಖರೀದಿ ಮಾಡಬಹುದು ಎಂದರು.